ಮೈಸೂರು:''ನಿಮ್ಮ ಬಂಡವಾಳ, ನೀವು ಮಾಡಿರುವ ಅಕ್ರಮಗಳು ನಮಗೂ ನಮಗೂ ಗೊತ್ತಿದೆ. ಜನರಿಗೂ ಕೂಡ ಗೊತ್ತಾಗಿದೆ. ಮುಂದಿನ ಚುನಾವಣೆಯಲ್ಲಿ ಜನ ನಿಮಗೆ ತಕ್ಕ ಉತ್ತರ ಕಲಿಸಲಿದ್ದಾರೆ'' ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಎಂ. ಲಕ್ಷ್ಮಣ್ ಅವರು ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಿನ್ನೆ ಸಂಸದ ಪ್ರತಾಪ್ ಸಿಂಹ ಅವರು, ಸಿದ್ದರಾಮಯ್ಯ, ಎಂ.ಬಿ. ಪಾಟೀಲ್, ಸಚಿವ ಎಚ್.ಸಿ. ಮಹಾದೇವಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇಂದು ಸಂಸದರ ಹೇಳಿಕೆಗೆ ಲಕ್ಷ್ಮಣ್ ಅವರು ತಿರುಗೇಟು ನೀಡಿದರು. ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಷಿ ಪಟಾಲಂನ ಅಧ್ಯಕ್ಷ ಪ್ರತಾಪ್ ಸಿಂಹ, ಕಾರ್ಯದರ್ಶಿ ಸಿ.ಟಿ. ರವಿ ಆಗಿದ್ದು, ನಿಮ್ಮ ಯೋಗ್ಯತೆಗೆ 8 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದು ಕ್ಷೇತ್ರದಲ್ಲಿ ಮಾತ್ರ ಗೆದ್ದಿದ್ದೀರಿ. ಜನರಿಗೆ ನಿಮ್ಮ ಬಗ್ಗೆ ಈಗಾಗಲೇ ಗೊತ್ತಾಗಿದೆ. ಮುಂದಿನ ಚುನಾವಣೆಯಲ್ಲಿ ನಿಮಗೆ ಜನ ತಕ್ಕ ಪಾಠ ಕಲಿಸುತ್ತಾರೆ. ಪ್ರತಾಪ್ ಸಿಂಹ ರಾಜ್ಯದ ಸಮಸ್ಯೆ ಕುರಿತು ಸಂಸತ್ನಲ್ಲಿ ಎಷ್ಟು ದಿನ ಮಾತನಾಡಿದ್ದೀರಿ ಎಂದು ಪ್ರಶ್ನಿಸಿದರು.
''ನೀವು ಸಿಎಂ ಸಿದ್ದರಾಮಯ್ಯನವರ ಬಗ್ಗೆ ಮಾತನಾಡಿದರೆ ದೊಡ್ಡ ಮನುಷ್ಯ ಆಗುತ್ತೇನೆ ಎಂದುಕೊಂಡಿದ್ದೀರಿ. ನಿಮ್ಮ ಬಂಡವಾಳ ನಮಗೂ ಹಾಗೂ ಜನರಿಗೂ ಗೊತ್ತಾಗಿದೆ. ನೀವು ಮಾಡಿರುವ ಅಕ್ರಮಗಳು ನಮ್ಮ ಗಮನಕ್ಕೂ ಬಂದಿದೆ. ಮೈಸೂರು ದಶಪಥ ಕಾಮಗಾರಿಯಲ್ಲಿ ಎಷ್ಟು ಪರ್ಸೆಂಟ್ ಕಮಿಷನ್ ತೆಗೆದುಕೊಂಡಿದ್ದೀರಿ ಎಂಬುದು ಗೊತ್ತು. ಕೊಡಗಿನಲ್ಲಿ ಎಷ್ಟು ಹೂಡಿಕೆ ಮಾಡಿದ್ದೀರಿ ಎನ್ನುವುದು ನಮಗೂ ಗೊತ್ತಿದೆ ಎಂದು ಲಕ್ಷ್ಮಣ್ ಕಿಡಿಕಾರಿದರು.