ಕರ್ನಾಟಕ

karnataka

ETV Bharat / state

ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ : ವಿಡಿಯೋ

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಬಂಧನ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ ನಡೆದಿದೆ.

By ETV Bharat Karnataka Team

Published : Sep 20, 2023, 7:26 PM IST

ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ
ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ

ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಮೈಸೂರಿನಲ್ಲಿ ಪ್ರತಿಭಟನೆ

ಮೈಸೂರು : ಆಂಧ್ರಪ್ರದೇಶದ ಮಾಜಿ ಜನಪ್ರಿಯ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ಅಕ್ರಮವಾಗಿ ಬಂಧಿಸಲಾಗಿದೆ ಎಂದು ಆರೋಪಿಸಿ ಮೈಸೂರು ಮತ್ತು ಚಾಮರಾಜನಗರದಲ್ಲಿ ವಾಸವಾಗಿರುವ ಆಂಧ್ರಪ್ರದೇಶದ ಮೂಲದ ಜನರು ನಗರದ ಟೌನ್ ಹಾಲ್ ಬಳಿ ಪ್ರತಿಭಟನೆ ನಡೆಸಿದರು. ಕೂಡಲೇ ಚಂದ್ರಬಾಬು ನಾಯ್ಡು ಅವರನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಆಂಧ್ರಪ್ರದೇಶದ ಜನಪ್ರಿಯ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಮೇಲೆ ಆಧಾರ ರಹಿತ ಆರೋಪಗಳನ್ನು ಮಾಡಿ, ಅವರನ್ನು ಅಕ್ರಮವಾಗಿ ಸಿಐಡಿ ಬಂಧಿಸಿದ್ದು, ಇದರಲ್ಲಿ ರಾಜಕೀಯ ದುರುದ್ದೇಶದಿಂದ ಅಡಗಿದೆ. 73 ವರ್ಷ ವಯಸ್ಸಿನ ಚಂದ್ರಬಾಬು ನಾಯ್ಡು ಅವರನ್ನು ಮುಂದಿನ ಆಂಧ್ರಪ್ರದೇಶದ ಚುನಾವಣಾ ದೃಷ್ಟಿಯಿಂದ ಆಧಾರ ರಹಿತ ಆರೋಪ ಮಾಡಿ ಬಂಧಿಸಲಾಗಿದೆ. ಅವರ ಮೇಲಿನ ಆರೋಪಗಳು ನಿರಾಧಾರವಾಗಿವೆ. ಎಲ್ಲಾ ಆರೋಪಗಳನ್ನು ಸೃಷ್ಟಿ ಮಾಡಲಾಗಿದೆ. ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈಗ ಇರುವ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಅವರ ಮೇಲೆ ಹಲವಾರು ಆರೋಪಗಳಿವೆ. ಜೊತೆಗೆ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ವಿಧಾನಸಭಾ ಚುನಾವಣೆಗೂ ಮುನ್ನ ಚಂದ್ರಬಾಬು ನಾಯ್ಡು ಅವರನ್ನು ಬಂಧನ ಮಾಡುವ ಮೂಲಕ, ಅವರ ಜನಪ್ರಿಯತೆಯನ್ನು ಕಡಿಮೆ ಮಾಡಲು ಜಗನ್​ ಮೋಹನ್​ ಅವರು ಹೊರಟಿದ್ದಾರೆ ಎಂದು ಅವರ ವಿರುದ್ಧ ಧಿಕ್ಕಾರ ಕೂಗಿ ಟಿಡಿಪಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ: ವಿಡಿಯೋ

ಸುಳ್ಳು ಕೇಸ್​ಗಳನ್ನು ಹಾಕಿದ್ದಾರೆ:ಈ ವೇಳೆ ಪ್ರತಿಭಟನಾಕಾರರಾದ ಬಾಲಚಂದ್ರ ಅವರು ಮಾತನಾಡಿ, ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಅಭಿವೃದ್ಧಿ ಹಾಗೂ ಅವರ ಕೆಲಸಗಳನ್ನು ಕಂಡು ಇಡೀ ದೇಶವೇ ಕೊಂಡಾಡುತ್ತೆ. ಅವರ 45 ವರ್ಷದ ರಾಜಕೀಯ ಜೀವನದಲ್ಲಿ ಒಂದು ಕಪ್ಪುಚುಕ್ಕೆಯೂ ಇಲ್ಲ. ಆದರೆ ಸಿಎಂ ಜಗನ್​ಮೋಹನ್​ ರೆಡ್ಡಿಯವರು ಬೇಕು ಅಂತಲೇ ಸುಳ್ಳು ಕೇಸ್​ಗಳನ್ನು ಹಾಕಿದ್ದಾರೆ. ಅವರ ಮೇಲೆಯೇ 18 ಇಡಿ ಕೇಸ್​ಗಳು ಇವೆ. ಅವರು ಇಂಡಿಯಾದಲ್ಲಿಯೇ ಶ್ರೀಮಂತ ಸಿಎಂ. ಆದರೆ ಭ್ರಷ್ಟಾಚಾರದಲ್ಲಿ ಪ್ರಪಂಚದಲ್ಲಿಯೇ ಅವರು ನಂಬರ್​ ಒನ್ ಆಗಿದ್ದಾರೆ. ಇವತ್ತು ತಮ್ಮ ಮೇಲೆ ಕಪ್ಪು ಚುಕ್ಕೆ ಇದೆ ಎಂದು ಇನ್ನೊಬ್ಬರ ಮೇಲೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು.

ಅಲ್ಲದೇ, ಚಂದ್ರಬಾಬು ನಾಯ್ಡು ಅವರನ್ನು ಸಿಐಡಿ ಮೂಲಕ ಜೈಲಿಗೆ ಹಾಕಿಸಿದ್ದಾರೆ. ಅವರ ಮೇಲಿನ ಎಲ್ಲಾ ಆರೋಪಗಳು ನಿರಾಧಾರವಾಗಿವೆ. ಮುಂದಿನ ಆರು ತಿಂಗಳಲ್ಲಿ ಚುನಾವಣೆ ಇದೆ. ಹೀಗಾಗಿ ಉದ್ದೇಶಪೂರ್ವಕವಾಗಿ ಅವರ ಮೇಲೆ ಕೇಸ್​ ಹಾಕಲಾಗಿದೆ. ಹೀಗಾಗಿ ನಾವು ಇದನ್ನು ಖಂಡಿಸುತ್ತೇವೆ. ನಮಗೆ ನ್ಯಾಯದ ಮೇಲೆ ನಂಬಿಕೆ ಇದೆ. ಅದೇ ರೀತಿ ಅವರಿಗೆ ನ್ಯಾಯ ಸಿಗಬೇಕು ಎಂದು ನಾವೆಲ್ಲರೂ ಬೆಂಬಲವಾಗಿ ನಿಂತಿದ್ದೇವೆ​ ಎಂದು ಹೇಳಿದ್ದಾರೆ.

ಇದನ್ನೂ ಓದಿ:ರಾಯಚೂರು: ಚಂದ್ರಬಾಬು ನಾಯ್ಡು ಬಂಧನ ವಿರೋಧಿಸಿ ಪ್ರತಿಭಟನೆ

ABOUT THE AUTHOR

...view details