ಮೈಸೂರು: ಧರ್ಮದ ಬಗ್ಗೆ ಚರ್ಚಿಸಲು ಪಂಥಾಹ್ವಾನ ಕೊಡಲು ಪೇಜಾವರ ಶ‍್ರೀಗಳು ಯಾರು ಎಂಬ ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಅವರ ಹೇಳಿಕೆಗೆ ಪೇಜಾವರ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಉಡುಪಿ ಪೇಜಾವರ ಶ‍್ರೀಗಳು, ವಿಶ್ವೇಶ್ವರ ತೀರ್ಥರು ಯಾರಿಗೂ ಸವಾಲು ಎಸಗಿಲ್ಲ. ಸೌಹಾರ್ದಕ್ಕೆ ಪಂಥ ಆಹ್ವಾನ ಕೊಟ್ಟಿದ್ದೇನೆ. ನೇರ ಸಂವಾದಕ್ಕೆ ಆಹ್ವಾನ ಕೊಟ್ಟಿದ್ದು ತಪ್ಪೇ? ಈ ವಿಚಾರಕ್ಕೆ ಮಾಜಿ ಸಚಿವರು ಆಕ್ರೋಶವಾಗಿ ಪ್ರತಿಕ್ರಿಯೆ ನೀಡಿರುವುದು ಅರ್ಥವಿಲ್ಲ. ಸರಿಯಾಗಿ ವಿಚಾರ ಮಾಡದೆ ಆರೋಪ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಗೃಹ ಸಚಿವ ಎಂ ಬಿ ಪಾಟೀಲರ ಪಂಥಾಹ್ವಾನ ಹೇಳಿಕೆಗೆ ಪೇಜಾವರ ಶ್ರೀಗಳ ಪ್ರತಿಕ್ರಿಯೆ.. ನಮ್ಮೊಳಗೆ ಇರುವ ಸಮಸ್ಯೆಯನ್ನು ನಾವು ಸರಿಪಡಿಸುವ ಕೆಲಸ ಮಾಡಬೇಕು. ಲಿಂಗಾಯತ ಮತ್ತು ವೀರಶೈವರ ನಡುವೆ ಧರ್ಮದ ವಿಚಾರದಲ್ಲಿ ಬಿಕ್ಕಟ್ಟು ಉಂಟಾದರೆ, ಹಿಂದೂ ಧರ್ಮ ದುರ್ಬಲವಾಗುತ್ತದೆ. ನಾನೊಬ್ಬ ಹಿಂದೂ ಧರ್ಮದವನಾಗಿ ಈ ವಿಚಾರ ಹೇಳುವುದು ತಪ್ಪೇ? ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಎಂ ಬಿ ಪಾಟೀಲ್ ಅವರು ಮಾತನಾಡಿದ್ದು ಸರಿಯಲ್ಲ ಎಂದು ಹೇಳಿದರು.
ಧರ್ಮದ ಹೆಸರಿನಲ್ಲಿ ಜಾತಿಗಳನ್ನು ಒಡೆದರೆ ಹಿಂದೂ ಧರ್ಮ ದುರ್ಬಲವಾಗುತ್ತದೆ. ಆ ದೃಷ್ಟಿಯಿಂದ ನಾನು ವೀರಶೈವ ಹಾಗೂ ಲಿಂಗಾಯತ ಧರ್ಮದ ಬಗ್ಗೆ ಮುಕ್ತ ಅಹ್ವಾನ ನೀಡಿದೆ. ಬ್ರಾಹ್ಮಣ ಸಮಾಜದಲ್ಲಿ ಏನಾದರೂ ಸಮಸ್ಯೆಗಳಿದ್ದರೆ ಅದನ್ನು ನಾವೇ ಬಗೆಹರಿಸಿಕೊಳ್ಳುತೇವೆ ಎಂದು ಮಾಜಿ ಸಚಿವರ ಹೇಳಿಕೆಗೆ ತಿರುಗೇಟು ನೀಡಿದರು.