ಸಾಂಸ್ಕೃತಿಕ ನಗರಿಯಲ್ಲಿ ಅವರೆ ಕಾಯಿ ಮತ್ತು ಅವರೆಕಾಯಿ ತಿಂಡಿಗಳ ಮೇಳ ಮೈಸೂರು:ಅವರೆ ಕಾಳಿನ ತಿಂಡಿ, ಅಡುಗೆ ಎಂದರೆ ಸಾಕು ಬಾಯಲ್ಲಿ ನಿರೂರುತ್ತದೆ. ಉಳಿದೆಲ್ಲ ಕಾಳುಗಳಿಗಿಂತ ಅವರೆ ತನ್ನದೇ ಆದ ವೈಶಿಷ್ಟ್ಯ, ರುಚಿ ಹೊಂದಿದೆ. ಇಂತಹ ಅವರೆ ಕಾಯಿ ಮತ್ತು ಅವರೆಕಾಯಿ ತಿಂಡಿಗಳ ಮೇಳ ಸಾಂಸ್ಕೃತಿಕ ನಗರಿಯಲ್ಲಿ ಜನರನ್ನು ಆಕರ್ಷಿಸುತ್ತಿದೆ.
ಈಗ ಅವರೆ ಕಾಳು ವರ್ಷಪೂರ್ತಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದು ಹೈಬ್ರಿಡ್ ಅವರೆ ಕಾಯಿ. ಆದರೆ ಚಳಿಗಾಲದಲ್ಲಿ ಸಿಗುವ ಸಾವಯವ ಅವರೆ ಕಾಯಿಯ ಮಹತ್ವವೇ ಬೇರೆ. ಇಂತಹ ಅವರೆಕಾಯಿಯಲ್ಲಿ ಮಾಡಿದ ಸಾಂಬಾರ್ ಹಾಗೂ ತಿಂಡಿಗಳು ತುಂಬಾ ರುಚಿಕರವಾಗಿರುತ್ತವೆ. ಸಾಂಸ್ಕೃತಿಕ ನಗರಿಯ ನಂಜರಾಜ ಬಹದ್ದೂರ್ ಛತ್ರದಲ್ಲಿ 4 ದಿನಗಳ ಕಾಲ ನಡೆಯುತ್ತಿರುವ ಅವರೆಕಾಯಿ ಮೇಳದಲ್ಲಿ ಅವರೆಕಾಯಿ ಹಾಗೂ ಅವರೆಕಾಯಿಯಿಂದ ಮಾಡಿದ ತಿಂಡಿ, ತಿನಿಸುಗಳು ಜನರನ್ನು ಇದೀಗ ಸೆಳೆಯುತ್ತಿದೆ.
ಅವರೆ ಕಾಯಿ ತಳಿಗಳು, ತಿಂಡಿಗಳು:ಪಾರಂಪರಿಕ ಅವರೆಯಲ್ಲಿ ಆರು ತಳಿಗಳಿದ್ದು ಹುರಿ ಆವರೆ, ಬಿಳಿ ಅವರೆ, ದಬ್ಬೆ ಅವರೆ, ಜಿಣ್ಣ ಅವರೆ, ಕೆಂಪವರೆ, ಬಳ್ಳಿ ಅವರೆ ಸೇರಿದಂತೆ ಹಲವಾರು ಅವರೆಯ ತಳಿಗಳು ಇವೆ. ಇವುಗಳಿಂದ ಅವರೆಕಾಳು ಸಾಂಬಾರ್, ಅವರೆಕಾಳು ರೊಟ್ಟಿ, ಅವರೆಕಾಳು ಗೊಜ್ಜು, ಅವರೆಕಾಳು ಚಿತ್ರಾನ್ನ, ಅವರೆಕಾಳು ವಡೆ, ಸೇರಿದಂತೆ ಹಲವಾರು ತಿಂಡಿಗಳನ್ನು ಮಾಡಬಹುದು.
ಚಳಿಗಾಲದಲ್ಲಿ ಬರುವ ನಾಟಿ ಅವರೆ ಆರೋಗ್ಯ ಮತ್ತು ರುಚಿಯಿಂದ ಕೂಡಿರುತ್ತದೆ. ಆದರೆ ವರ್ಷ ಪೂರ್ತಿ ಸಿಗುವ ಅವರೆಯಿಂದ ರುಚಿ ಕಡಿಮೆ. ಅದನ್ನು ಕುಕ್ಕರ್‌ನಲ್ಲಿ ಮಾತ್ರ ಬೇಯಿಸಬಹುದು. ಸಾಮಾನ್ಯ ಒಲೆಯಲ್ಲಿ ಬೇಯಿಸುವುದು ಕಷ್ಟ ಹಾಗೂ ಇದರಲ್ಲಿ ಪೌಷ್ಟಿಕಾಂಶಗಳು ಅಷ್ಟಿಲ್ಲ ಎನ್ನುತ್ತಾರೆ ಸಾವಯವ ರೈತ ಕಾಳಪ್ಪ.
ಇದನ್ನೂ ಓದಿ:ಮೈಸೂರು: ಸೆರೆ ಹಿಡಿದ ಚಿರತೆ ತೋರಿಸುವಂತೆ ಗ್ರಾಮಸ್ಥರ ಪಟ್ಟು