ಮೈಸೂರು:ಲೋಕಸಭಾ ಕಲಾಪ ನಡೆಯುತ್ತಿದ್ದಾಗ ಸದನದೊಳಗೆ ನುಗ್ಗಿ ಸ್ಮೋಕ್ ಗ್ಯಾಸ್ ಸಿಡಿಸಿ ಕೋಲಾಹಲ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ 2ನೇ ಆರೋಪಿ ಮನೋರಂಜನ್ ವಾಸವಿದ್ದ ಮೈಸೂರಿನ ಮನೆಯ ಪ್ರತ್ಯೇಕ ಕೊಠಡಿಗೆ ಸ್ಥಳೀಯ ಪೊಲೀಸರು ಬೀಗ ಹಾಕಿದ್ದು, ಭದ್ರತೆ ಕಲ್ಪಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗುಪ್ತಚರ ಇಲಾಖೆಯ ಸ್ಥಳೀಯ ಅಧಿಕಾರಿಗಳು ಹಾಗೂ ರಾಜ್ಯ ಗುಪ್ತಚರ ಇಲಾಖೆಯ ಅಧಿಕಾರಿಗಳೂ ಕೂಡಾ ತನಿಖೆ ಚುರುಕುಗೊಳಿಸಿದ್ದಾರೆ.
ಬುಧವಾರ ಲೋಕಸಭೆಯಲ್ಲಿ ಕಲಾಪ ನಡೆಯುತ್ತಿರುವ ವೇಳೆ ಕಲಾಪಕ್ಕೆ ನುಗ್ಗಿದ ಸಾಗರ್ ಶರ್ಮಾ ಹಾಗೂ ಮೈಸೂರಿನ ಮನೋರಂಜನ್ ಸೇರಿದಂತೆ ಇತರ ಆರೋಪಿಗಳನ್ನು ಕೋರ್ಟ್ ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಈ ಮಧ್ಯೆ ಪ್ರಕರಣದ ಎರಡನೇ ಆರೋಪಿ ಮೈಸೂರಿನ ಮನೋರಂಜನ್ ಮನೆಗೆ ಕೇಂದ್ರ ಗುಪ್ತಚರ ಇಲಾಖೆಯ ಸ್ಥಳೀಯ ಅಧಿಕಾರಿಗಳು ಹಾಗೂ ರಾಜ್ಯ ಗುಪ್ತಚರ ಇಲಾಖೆಯ ಸ್ಥಳೀಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಮನೆಯ ಮೇಲ್ಭಾಗದಲ್ಲಿದ್ದ ಮನೋರಂಜನ್ ಕೊಠಡಿ ವೀಕ್ಷಿಸಿದ ಗುಪ್ತಚರ ಇಲಾಖೆ ಅಧಿಕಾರಿಗಳು ಮತ್ತೆ ಬರುವುದಾಗಿ ಹೇಳಿ ತೆರಳಿದ್ದಾರೆ.
ಈ ನಡುವೆ ಎಂಜಿನಿಯರಿಂಗ್ ಪದವೀಧರ ಮನೋರಂಜನ್ ಯಾವುದೇ ಕೆಲಸ ಮಾಡುತ್ತಿರಲಿಲ್ಲ ಎಂದು ತಂದೆ ದೇವರಾಜೇಗೌಡ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆತನಿಗೆ ದೆಹಲಿ ಮತ್ತು ಬೇರೆಡೆ ಓಡಾಡಲು ಹಣ ಎಲ್ಲಿಂದ ಬರುತ್ತಿತ್ತು ಎನ್ನುವುದರ ಕುರಿತು ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಮನೋರಂಜನ್ ಬಳಸುತ್ತಿದ್ದ ಫೋನ್, ಬ್ಯಾಂಕ್ ಖಾತೆಗಳು, ಫೋನ್ ಪೇ, ಗೂಗಲ್ ಪೇ ಸೇರಿದಂತೆ ಆತನಿಗೆ ಸೇರಿದ ಇತರ ಮಾಹಿತಿಗಳನ್ನು ಗುಪ್ತಚರ ಇಲಾಖೆಯ ಅಧಿಕಾರಿಗಳು ಪಡೆದುಕೊಳ್ಳುತ್ತಿದ್ದಾರೆ.
ಮೈಸೂರಿಗೆ ಬಂದಿದ್ದ ಸಾಗರ್ ಶರ್ಮಾ: ಕಲಾಪದ ವೇಳೆ ಸ್ಮೋಕ್ ಗ್ಯಾಸ್ ಸಿಡಿಸಿ ರಂಪ ಮಾಡಿದ್ದ ಉತ್ತರಪ್ರದೇಶ ಮೂಲದ ಸಾಗರ್ ಶರ್ಮಾ ಪ್ರಕರಣದ ಮೊದಲ ಆರೋಪಿ. ಈತ ಮೈಸೂರಿಗೆ ಆಗಮಿಸಿ ಮನೋರಂಜನ್ ಜೊತೆ ತಿರುಗಾಡಿದ್ದನು. ಮೈಸೂರಿನಲ್ಲೇ ಸಭೆ ನಡೆಸಿರುವ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದೆ. ಈ ಹಿನ್ನೆಲೆಯಲ್ಲಿ ಸಾಗರ್ ಶರ್ಮಾ ಹಾಗೂ ಮನೋರಂಜನ್ ಮೈಸೂರಿನಲ್ಲಿ ಯಾವ್ಯಾವ ಸ್ಥಳಗಳಿಗೆ ಭೇಟಿ ನೀಡಿದ್ದರು, ಯಾರ್ಯಾರನ್ನು ಭೇಟಿ ಮಾಡಿದ್ದರು ಎಂಬ ಮಾಹಿತಿಯನ್ನು ಗುಪ್ತಚರ ಇಲಾಖೆಯ ಅಧಿಕಾರಿಗಳು ಕಲೆ ಹಾಕುತ್ತಿದ್ದಾರೆ.
ಮಲ್ಲಾಪುರ ಗ್ರಾಮದಲ್ಲಿ ಪರಿಶೀಲನೆ: ಮನೋರಂಜನ್ ತಂದೆ ದೇವರಾಜೇಗೌಡ ಅವರ ಹುಟ್ಟೂರು ಅರಕಲಗೂಡಿನ ಮಲ್ಲಾಪುರ ಗ್ರಾಮಕ್ಕೆ ಸ್ಥಳೀಯ ಕೊಣನೂರು ಪೊಲೀಸರು ಭೇಟಿ ನೀಡಿ, ಆತನ ತಂದೆ ಹಾಗೂ ಇತರರ ಬಗ್ಗೆ ಮಾಹಿತಿ ಪಡೆದಿದ್ದಾರೆ. ಗ್ರಾಮದಲ್ಲಿ ದೇವರಾಜೇಗೌಡ ನಾಲ್ಕು ಎಕರೆ ಫಾರಂ ಹೌಸ್ ಹೊಂದಿದ್ದು, ಅಲ್ಲಿಗೆ ಆಗಾಗ್ಗೆ ಬಂದು ಹೋಗುತ್ತಾರೆ ಎಂಬ ಮಾಹಿತಿ ಗ್ರಾಮಸ್ಥರು ನೀಡಿದ್ದಾರೆ. ಗ್ರಾಮದ ಜನರು ಮನೋರಂಜನ್ ಅವರನ್ನು ನೋಡಿಲ್ಲ ಎಂದಿದ್ದು, ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮೈಸೂರಿಗೆ ದೇವರಾಜೇಗೌಡ 25 ವರ್ಷಗಳ ಹಿಂದೆ ಹೋಗಿದ್ದರು ಎಂಬ ಮಾಹಿತಿಯನ್ನು ನೀಡಿದ್ದಾರೆ. ವಿಜಯನಗರದ 2ನೇ ಹಂತದ ಮನೋರಂಜನ್ ಮನೆಗೆ ಸ್ಥಳೀಯ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದ್ದಾರೆ.
ಮನೋರಂಜನ್ ತಮ್ಮ ಮನೆಯ ಮೇಲ್ಭಾಗದಲ್ಲಿರುವ ರೂಮಿನಲ್ಲಿ ವಾಸವಿದ್ದು, ಅಲ್ಲಿರುವ ಪುಸ್ತಕಗಳು ಹಾಗೂ ಇತರ ವಸ್ತುಗಳನ್ನು ಹೊರಗೆ ತೆಗೆದುಕೊಂಡು ಹೋಗದಂತೆ ಗುಪ್ತಚರ ಇಲಾಖೆಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಪೊಲೀಸರು ಮನೋರಂಜನ್ ವಾಸವಿದ್ದ ರೂಮಿಗೆ ಬೀಗ ಹಾಕಿದ್ದಾರೆ. ತನಿಖಾಧಿಕಾರಿಗಳು ಬರುವವರೆಗೆ ಬೀಗ ತೆಗೆಯದಂತೆ ಸೂಚಿಸಿದ್ದು, ದೇವರಾಜೇಗೌಡ ಅವರಿಂದ ಮಗನ ಬಗ್ಗೆ ಕೆಲವು ಮಾಹಿತಿ ಪಡೆದುಕೊಂಡಿದ್ದಾರೆ. ದೆಹಲಿ ತನಿಖಾಧಿಕಾರಿಗಳ ವಶದಲ್ಲಿರುವ ಮನೋರಂಜನ್‌ನನ್ನು ಸ್ಥಳ ಮಹಜರಿಗಾಗಿ ಪೊಲೀಸರು ಮೈಸೂರಿಗೆ ಕರೆದುಕೊಂಡು ಬರುವ ಸಾಧ್ಯತೆಯೂ ಇದೆ ಎನ್ನಲಾಗಿದೆ.
ಇದನ್ನೂಓದಿ:ಸಂಸದ ಪ್ರತಾಪಸಿಂಹರನ್ನು ತನಿಖೆಗೆ ಒಳಪಡಿಸಬೇಕು: ಡಾ ಯತೀಂದ್ರ ಸಿದ್ದರಾಮಯ್ಯ