ಈಟಿವಿಯೊಂದಿಗೆ ಮಾತನಾಡಿದ ಪ್ಯಾರಾ ಬ್ಯಾಡ್ಮಿಂಟನ್ ಆಟಗಾರ್ತಿ ಪಡಲ ರೂಪಾದೇವಿ ಶ್ರೀಕಾಕುಳಂ/ಮೈಸೂರು: ಸಾಧಿಸುವ ಛಲವಿದ್ದರೆ ಯಾವ ಕೊರತೆಯು ಸಾಧನೆಗೆ ಅಡ್ಡಿಯಾಗುವುದಿಲ್ಲ ಎಂಬುದಕ್ಕೆ ಆಂಧ್ರಪ್ರದೇಶದ ಯುವತಿ ಸಾಕ್ಷಿಯಾಗಿದ್ದಾಳೆ. ಹೌದು, ಶ್ರೀಕಾಕುಳಂನ ಪಡಲ ರೂಪಾದೇವಿ ತನ್ನ ಅಂಗವೈಕಲ್ಯವನ್ನು ಮೆಟ್ಟಿ ನಿಂತು ಥೈಲ್ಯಾಂಡ್ನಲ್ಲಿ ನಡೆಯಲಿರುವ ಪ್ಯಾರಾ ಬ್ಯಾಡ್ಮಿಂಟನ್ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪಡಲ ರೂಪಾದೇವಿ ಅವರು ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಸಂತಾವುರಿ ಗ್ರಾಮದವರು. ತುಂಬಾ ಬಡ ಕುಟುಂಬದಿಂದ ಬಂದಿರುವ ಅವರು ಆರು ವರ್ಷ ಇರುವಾಗ ತಮ್ಮ ತಂದೆ ಸತ್ಯರಾವ್ ಅವರನ್ನು ಕಳೆದುಕೊಂಡರು. ಬಳಿಕ ತಾಯಿ ಯಶೋಧ ಕೂಲಿ ಮಾಡಿ ರೂಪಾದೇವಿ ಮತ್ತು ಅವರ ಅಕ್ಕನನ್ನು ಸಾಕುತ್ತಿದ್ದರು.
2019ರಲ್ಲಿ ರೂಪಾ ಅವರು ಬಿಎಸ್ಸಿ ಮೊದಲ ವರ್ಷ ವ್ಯಾಸಂಗ ಮಾಡುತ್ತಿದ್ದರು. ಈ ವೇಳೆ ಬೇಸಿಗೆ ರಜೆಗೆಂದು ಅಕ್ಕನ ಮನೆಗೆ ಹೋಗಿದ್ದರು. ಅಲ್ಲಿ ಎರಡನೇ ಮಹಡಿಯಿಂದ ಆಯತಪ್ಪಿ ಬಿದ್ದ ರೂಪಾ, ತಮ್ಮ ಎರಡು ಕಾಲುಗಳನ್ನು ಮುರಿದುಕೊಂಡಿದ್ದರು. ಬಳಿಕ ಎರಡು ವರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಕಾಲುಗಳಿಗೆ ಐರನ್ ರಾಡ್ ಅಳವಡಿಸಲಾಗಿತ್ತು. ಈ ರಾಡ್ಗಳಿಂದ ತೊಂದರೆ ಅನುಭವಿಸಿದ್ದರಿಂದ ಇದನ್ನು ತೆಗೆಸಲಾಗಿತ್ತು.
2020ರಲ್ಲಿ ಮನೆಯಲ್ಲಿನ ಬಡತನ ಹಾಗೂ ಆಸ್ಪತ್ರೆಯ ಖರ್ಚನ್ನು ಸರಿದೂಗಿಸಲು ರೂಪಾದೇವಿಯವರು, ಉದ್ಯೋಗ ಅರಸಿಕೊಂಡು ಬೆಂಗಳೂರಿಗೆ ಬಂದರು. ಒಂದು ದಿನ ಇಲ್ಲಿ ನಡೆಯುತ್ತಿದ್ದ ಓಪನ್ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ರೂಪಾ ಭಾಗವಹಿಸಿದ್ದಾರೆ. ಯಾವುದೇ ತರಬೇತಿ ಇಲ್ಲದೆ ಆಡಿದರೂ ರೂಪಾ ಈ ಪಂದ್ಯದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಇದನ್ನು ಕಂಡ ತರಬೇತುದಾರರು, ಇವರಿಗೆ ಸೂಕ್ತ ತರಬೇತಿ ನೀಡಲು ಪ್ರಾರಂಭಿಸಿದರು.
ಆಂಧ್ರ ಪ್ರದೇಶ ರಾಜ್ಯವನ್ನು ಪ್ರತಿನಿಧಿಸಿರುವ ರೂಪಾದೇವಿ, ಕಳೆದ ಆರು ತಿಂಗಳ ಹಿಂದೆ ಉತ್ತರ ಪ್ರದೇಶದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆ ಡಬಲ್ಸ್ನಲ್ಲಿ ಬೆಳ್ಳಿ, ಸಿಂಗಲ್ಸ್ನಲ್ಲಿ ಚಿನ್ನದ ಪದಕ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಮುಂದಿನ ತಿಂಗಳು ಥೈಲ್ಯಾಂಡ್ ನಲ್ಲಿ ನಡೆಯಲಿರುವ ಪ್ಯಾರಾ ಬ್ಯಾಡ್ಮಿಂಟನ್ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಥೈಲ್ಯಾಂಡ್ಗೆ ತೆರಳಲು ಹಣ ಹೊಂದಿಸಲು ಕಷ್ಟವಾದಾಗ 'ಈಟಿವಿ'ಮತ್ತುಈನಾಡುಸಮೂಹ ಸಂಸ್ಥೆಗಳ ಚೇರ್ಮನ್ ರಾಮೋಜಿ ರಾವ್ ಅವರು ಹಣಕಾಸು ಸಹಾಯ ಮಾಡಿದ್ದಾರೆ. ಈ ಸಹಾಯವನ್ನು ನೆನೆದು ರೂಪಾದೇವಿ ಅವರು ರಾಮೋಜಿ ರಾವ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ರೂಪಾದೇವಿಯವರು ಕಳೆದ ಒಂದು ವರ್ಷದಿಂದ ಮೈಸೂರಿನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಇವರಿಗೆ ತರಬೇತಿ ನೀಡುತ್ತಿರುವ ಕೋಚ್ ಅವರು ಮೈಸೂರಿನಲ್ಲಿ ಉಳಿದುಕೊಳ್ಳಲು ಮನೆಯೊಂದನ್ನು ಮಾಡಿಕೊಟ್ಟಿದ್ದು, ಇದಕ್ಕಾಗಿ ತರಬೇತುದಾರರಿಗೂ ಈ ಕ್ರೀಡಾ ತಾರೆ ಕೃತಜ್ಞತೆ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ರೂಪಾದೇವಿ, ನಮ್ಮ ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಅದನ್ನೆಲ್ಲ ಎದುರಿಸಿ ಮುಂದೆ ಸಾಗಬೇಕು. ಜೀವನದಲ್ಲಿ ಎದುರಾಗುವ ಸಮಸ್ಯೆ ಬಗ್ಗೆ ಯೋಚಿಸುತ್ತ ಕಾಲಹರಣ ಮಾಡಬಾರದು. ಸಾಧಿಸುವ ಛಲ ಇದ್ದರೆ ಎಲ್ಲವೂ ಸಾಧ್ಯ ಎಂದು ಹೇಳುತ್ತಾರೆ.
ರಾಮೋಜಿ ರಾವ್ ಅವರಿಂದ 3 ಲಕ್ಷ ರೂ. ಸಹಾಯ: ಅಂತಾರಾಷ್ಟ್ರೀಯ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಗೆ ಆಯ್ಕೆಯಾದ ರೂಪಾದೇವಿ ಅವರಿಗೆ, ಥೈಲ್ಯಾಂಡ್ ಸ್ಪರ್ಧೆಗೆ ಹೋಗಲು ಕಷ್ಟವಾದಾಗ ಆಂಧ್ರ ಸರ್ಕಾರದ ಸಹಾಯ ಕೋರಿದರು. ಆದರೆ ಸರ್ಕಾರ ನೆರವಿಗೆ ಬರಲಿಲ್ಲ. ಇಂತಹ ಸಂದರ್ಭದಲ್ಲಿ ಈಟಿವಿ ಮತ್ತು ಈನಾಡು ಸಮೂಹ ಸಂಸ್ಥೆಗಳ ಚೇರ್ಮನ್ ರಾಮೋಜಿ ರಾವ್ ಅವರು 3 ಲಕ್ಷ ಹಣ ಸಹಾಯ ಮಾಡಿ ಕ್ರೀಡೆಗೆ ಪ್ರೋತ್ಸಾಹ ನೀಡಿದ್ದಾರೆ. ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಮುಂದಿನ ತಿಂಗಳು ಥೈಲ್ಯಾಂಡ್ ನಲ್ಲಿ ನಡೆಯುವ ಪ್ಯಾರಾ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಡಬಲ್ಸ್ ಹಾಗೂ ಸಿಂಗಲ್ಸ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸುತ್ತಿದ್ದೇನೆ ಎಂದು ರೂಪಾದೇವಿ ತಿಳಿಸಿದರು.
ಇದನ್ನೂ ಓದಿ :ನೂರು ಸಂಚಿಕೆ ತಲುಪಲಿರುವ ಮನ್ ಕಿ ಬಾತ್: ಮರಳಲ್ಲಿ ಮೂಡಿದ ರೇಡಿಯೋದೊಂದಿಗಿನ ಮೋದಿ ಕಲಾಕೃತಿ