ಮೈಸೂರು: ಲಾಕ್ಡೌನ್ ಹಿನ್ನಲೆಯಲ್ಲಿ ಸಾಂಕ್ರಾಮಿಕ ರೋಗಗಳ ಪ್ರಮಾಣ ಕಡಿಮೆಯಾಗಿದ್ದು, ಈ ವರ್ಷ ಮಲೇರಿಯಾ, ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಸಂಖ್ಯೆ ಕಡಿಮೆಯಾಗಿದೆ.
ಕಳೆದ ಜನವರಿಯಿಂದ ಆಗಸ್ಟ್ವರೆಗೆ ಲಾಕ್ಡೌನ್ ಹಿನ್ನಲೆಯಲ್ಲಿ ಜನರ ಓಡಾಟ ಕಡಿಮೆಯಾಗಿದ್ದು, ಪರಿಸರ ಸ್ವಚ್ಛವಾಗಿರುವ ಹಿನ್ನಲೆಯಲ್ಲಿ ಮಳೆಗಾಲದಲ್ಲಿ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ ಹಾಗೂ ಚಿಕನ್ ಗುನ್ಯಾದಂತಹ ಕಾಯಿಲೆಗಳು ಕಳೆದ ವರ್ಷಕ್ಕೆ ಹೋಲಿಸಿದರೆ ತುಂಬಾ ಕಡಿಮೆ ಇದೆ.
ಕಡಿಮೆಯಾದ ಸಾಂಕ್ರಾಮಿಕ ರೋಗಗಳು ಚಿಕನ್ ಗುನ್ಯಾ:ಇದು ಈಡಿಸ್ ಈಜಿಪ್ಟೈ ಎಂಬ ಸೊಳ್ಳೆಯಿಂದ ಹರಡುತ್ತದೆ. ಈ ಕಾಯಿಲೆಗೆ ವ್ಯಾಕ್ಸಿನ್ ಇಲ್ಲದ ಕಾರಣ ಇದು ಉಳಿದುಕೊಂಡಿದೆ. ಚಿಕನ್ ಗುನ್ಯಾ ಸೊಳ್ಳೆಯಿಂದ ಹರಡುವ ರೋಗವಾಗಿದ್ದು ಇದು ಒಬ್ಬ ವ್ಯಕ್ತಿಯಿಂದ ಒಬ್ಬ ವ್ಯಕ್ತಿಗೆ ಹರಡುವ ಕಾಯಿಲೆಯಾದೆ. 2007-08ರಲ್ಲಿ ಶೇ 80ರಷ್ಟು ಜನರಲ್ಲಿ ಈ ರೋಗ ಕಂಡುಬಂದಿದ್ದು, ಈಗ ಈ ರೋಗ ಹತೋಟಿಯಲ್ಲಿದೆ. ಕಳೆದ ಜನವರಿಯಿಂದ ಆಗಸ್ಟ್ವರೆಗೆ ಮೈಸೂರು ಜಿಲ್ಲೆಯಲ್ಲಿ ಕೇವಲ 13 ಚಿಕನ್ ಗುನ್ಯಾ ಪ್ರಕರಣಗಳು ಮಾತ್ರ ಕಂಡು ಬಂದಿದೆ. ಸೊಳ್ಳೆಗಳು ಕೊಳಚೆ ನೀರಿನಲ್ಲಿ ಕೂತು ಮನುಷ್ಯನಿಗೆ ಕಚ್ಚಿದಾಗ ಈ ರೋಗ ಬರುತ್ತದೆ. ಮಾನ್ಸೂನ್ ಅವಧಿಯಲ್ಲಿ ಈ ರೋಗ ಹೆಚ್ಚಾಗಿದ್ದು, ಲಾಕ್ಡೌನ್ ಹಿನ್ನಲೆಯಲ್ಲಿ ಚಿಕನ್ ಗುನ್ಯಾ ಪ್ರಕರಣಗಳು ಕಡಿಮೆಯಾಗಿದೆ.
ಮಲೇರಿಯಾ: ಮೈಸೂರು ಜಿಲ್ಲೆಯಲ್ಲಿ 2018ರಲ್ಲಿ 7-8 ಮಲೇರಿಯಾ ಪ್ರಕರಣಗಳು ಮಾತ್ರ ಕಂಡು ಬಂದಿದ್ದು, 2019-20ರಲ್ಲಿ ಆಗಸ್ಟ್ವರೆಗೆ ಯಾವುದೇ ಮಲೇರಿಯಾ ಪ್ರಕರಣಗಳು ಕಂಡು ಬಂದಿಲ್ಲ. ಆದರೂ ರೋಗಲಕ್ಷಣಗಳು ಕಂಡು ಬಂದ ತಕ್ಷಣ ಪರೀಕ್ಷೆ ನಡೆಸಿದ್ದು, ಅದರಲ್ಲೂ ಸಹ ಯಾವುದೇ ಮಲೇರಿಯಾ ಪ್ರಕರಣಗಳು ಕಂಡು ಬಂದಿಲ್ಲ. ಆದ್ದರಿಂದ ಮೈಸೂರು ಜಿಲ್ಲೆಯನ್ನು ಮಲೇರಿಯಾ ಮುಕ್ತ ಜಿಲ್ಲೆ ಎಂದು ಕರೆಯುತ್ತಾರೆ.
ಡೆಂಗ್ಯೂ: ಡೆಂಗ್ಯೂ ವರ್ಷ ಪೂರ್ತಿ ಇರುವ ಸಾಂಕ್ರಾಮಿಕ ರೋಗವಾಗಿದ್ದು, ಮೈಸೂರು ಜಿಲ್ಲೆಯಲ್ಲಿ 2013, 2017ರಲ್ಲಿ ಅತಿ ಹೆಚ್ಚು ಡೆಂಗ್ಯೂ ಪ್ರಕರಣಗಳು ವರದಿಯಾಗಿತ್ತು. ಈ ಸಂದರ್ಭದಲ್ಲಿ 1000 ಜನರಿಗೆ ಡೆಂಗ್ಯೂ ಬಂದಿದ್ದು, ಇಬ್ಬರು ಸಾವನ್ನಪ್ಪಿದ್ದರು. 2020 ಜನವರಿಯಿಂದ ಆಗಸ್ಟ್ವರೆಗೆ 23 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಲಾಕ್ಡೌನ್ನಿಂದ ಮಾಲಿನ್ಯ ಇಲ್ಲದ ಕಾರಣ ಸೊಳ್ಳೆಗಳು ಹೆಚ್ಚು ಇಲ್ಲದೆ ಡೆಂಗ್ಯೂ ಪ್ರಕರಣಗಳು ಕಡಿಮೆಯಾಗಿದೆ ಆದರೂ ಮಳೆಗಾಲ ಆದ್ದರಿಂದ ಇನ್ನು ಮುಂದೆ ಸೊಳ್ಳೆಗಳಿಂದ ರಕ್ಷಣೆ ಮಾಡಿಕೊಳ್ಳುವುದು ಅವಶ್ಯಕವಾಗಿದೆ.
ಈ ವರ್ಷ ಮೈಸೂರು ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳಾದ ಚಿಕನ್ ಗುನ್ಯಾ, ಮಲೇರಿಯಾ ಹಾಗೂ ಡೆಂಗ್ಯೂದಂತಹ ಪ್ರಕರಣಗಳು ಲಾಕ್ಡೌನ್ ಹಿನ್ನಲೆಯಲ್ಲಿ ಕಡಿಮೆಯಾಗಿದೆ. ಆದರೂ ಎಲ್ಲಾ ರೀತಿಯ ಮುನ್ನೆಚ್ಚರಿಕೆಗಳನ್ನು ವಹಿಸಿಲಾಗಿದೆ ಎಂದು ಸಾಂಕ್ರಾಮಿಕ ರೋಗಗಳ ವಿಭಾಗದ ಮುಖ್ಯಸ್ಥರಾದ ಡಾ.ಚಿದಂಬರಂ ವಿವರಿಸಿದ್ದಾರೆ.