ಮೈಸೂರು:ಕೋವಿಡ್ ಹಿನ್ನೆಲೆ ದಸರಾವನ್ನು ಹೇಗೆ ಸರಳವಾಗಿ ಮಾಡಲಾಯಿತೋ ಹಾಗೆಯೇ ಪಂಚಲಿಂಗದರ್ಶನ ಮಹೋತ್ಸವವನ್ನೂ ಮಾಡೋಣ. ವರ್ಚುವಲ್ ವ್ಯವಸ್ಥೆಯನ್ನು ಮಾಡುವುದು ಒಳ್ಳೆಯದು. ಈ ಬಗ್ಗೆ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಬಳಿಯೂ ಚರ್ಚಿಸಿದ್ದೇನೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ನಡೆದ ಪಂಚಲಿಂಗ ದರ್ಶನ ಮಹೋತ್ಸವ ಕುರಿತ ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಲಹೆ, ಮಾಹಿತಿಯನ್ನು ಪಡೆದು ಸಚಿವರು ಮಾತನಾಡಿದರು. ತಜ್ಞರ ಸಮಿತಿಯೊಂದನ್ನು ರಚಿಸಬೇಕಿದೆ. ಈ ತಂಡ ತಲಕಾಡಿಗೆ ಭೇಟಿ ನೀಡಿ ವರದಿ ಕೊಡಲಿ. ಅವರ ವರದಿ ಆಧಾರದ ಮೇಲೆ ಆಚರಣೆ ಮಾಡೋಣ. ಜೊತೆಗೆ ಚಳಿಗಾಲ ಬರುತ್ತಿರುವುದರಿಂದ ಹೆಚ್ಚಿನ ನಿಗಾ ವಹಿಸುವುದು ಒಳ್ಳೆಯದು ಎಂದು ಸಚಿವರು ತಿಳಿಸಿದರು.
ತಲಕಾಡಿನಲ್ಲಿ ಅಭಿವೃದ್ಧಿ ಕಾರ್ಯಗಳೂ ಆಗಬೇಕು. ಡಿ.14ರಿಂದ ಪಂಚಲಿಂಗ ದರ್ಶನ ಮಹೋತ್ಸವ ಆರಂಭವಾಗುತ್ತಿರುವುದರಿಂದ ಎಲ್ಲವನ್ನೂ ಒಮ್ಮೆಲೆ ಮಾಡಲು ಸಾಧ್ಯವಾಗುವುದಿಲ್ಲ. ತುರ್ತು ಕೆಲಸಗಳನ್ನು ಈಗ ಮಾಡಿಕೊಳ್ಳಿ. ಹಂತಹಂತವಾಗಿ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡೋಣ ಎಂದು ಸಚಿವ ಸೋಮಶೇಖರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ತಜ್ಞರ ತಂಡದ ವರದಿ ಬಳಿಕ ತೀರ್ಮಾನ:ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ 5-6 ಮಂದಿಯ ತಂಡ ರಚಿಸಲಾಗುವುದು. ಈ ತಂಡ ತಲಕಾಡಿಗೆ ಭೇಟಿ ನೀಡಿ ವರದಿ ಸಿದ್ಧಪಡಿಸಲಿದೆ. ಇನ್ನು ತಜ್ಞರ ತಂಡ ನೀಡುವ ವರದಿ ಆಧಾರದಲ್ಲಿ ಎಷ್ಟು ಜನ ಇರಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.
ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ: ಪಂಚಲಿಂಗದರ್ಶನ ಮಹೋತ್ಸವಕ್ಕೆ ಬೇಕಾದ ತಯಾರಿಗಳು ನಡೆಯಲಿ. ಸುಣ್ಣ ಬಣ್ಣ, ದೀಪಾಲಂಕಾರ, ರಸ್ತೆ, ಚರಂಡಿ ವ್ಯವಸ್ಥೆಗಳು ಸೇರಿದಂತೆ ಪ್ರತಿ ಬಾರಿ ನಡೆಯುವ ಕಾರ್ಯಕ್ರಮದಂತೆ ನಡೆಸುವ ಕಾಮಗಾರಿಗಳಿಗೆ ಎಷ್ಟು ಖರ್ಚು ಬೇಕಾಗುತ್ತದೆ ಎಂದು ಅಂದಾಜು ವೆಚ್ಚವನ್ನು ಪಟ್ಟಿ ಮಾಡಿ ಜಿಲ್ಲಾಡಳಿತ ಮುಖಾಂತರ ಪ್ರಸ್ತಾವನೆ ಸಲ್ಲಿಸಿ ಎಂದರು. ಸರ್ಕಾರದ ನಿರ್ಧಾರದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳೋಣ ಎಂದು ಸಚಿವ ಎಸ್.ಟಿ. ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.