ಕರ್ನಾಟಕ

karnataka

ETV Bharat / state

ಅರಮನೆ ಫಲಪುಷ್ಪ ಪ್ರದರ್ಶನದಲ್ಲಿ ನೋಡುಗರ ಮನ ಸೆಳೆಯುತ್ತಿರುವ ವಿವಿಧ ಆಕೃತಿಗಳು

2023ರ ಅರಮನೆ ಫಲಪುಷ್ಪ ಪ್ರದರ್ಶನದಲ್ಲಿ ವಿವಿಧ ಆಕೃತಿಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ.

Palace flower show 2023 in mysore
ಅರಮನೆ ಫಲಪುಷ್ಪ ಪ್ರದರ್ಶನದಲ್ಲಿ ನೋಡುಗರ ಮನಸೆಳೆಯುತ್ತಿರುವ ವಿವಿಧ ಆಕೃತಿಗಳು

By ETV Bharat Karnataka Team

Published : Dec 23, 2023, 6:02 PM IST

Updated : Dec 23, 2023, 7:57 PM IST

ಅರಮನೆ ಫಲಪುಷ್ಪ ಪ್ರದರ್ಶನದಲ್ಲಿ ನೋಡುಗರ ಮನ ಸೆಳೆಯುತ್ತಿರುವ ವಿವಿಧ ಆಕೃತಿಗಳು

ಮೈಸೂರು: ಕ್ರಿಸ್ಮಸ್ ಹಾಗೂ ಹೊಸ ವರ್ಷದ ಪ್ರಯುಕ್ತ ಅರಮನೆಯ ಆವರಣದಲ್ಲಿ 10 ದಿನಗಳ ಕಾಲ ನಡೆಯಲಿರುವ ಫಲಪುಷ್ಪ ಪ್ರದರ್ಶನದ ಮಾಗಿ ಉತ್ಸವ ಆರಂಭವಾಗಿದ್ದು, ಇದರಲ್ಲಿ ಹೂವುಗಳಿಂದಲೇ ಮೂಡಿ ಬಂದ ಹಲವು ಆಕೃತಿಗಳು ಪ್ರವಾಸಿಗರ ಗಮನ ಸೆಳೆಯುತ್ತಿದೆ. ಕ್ಯಾಪ್ಟನ್​ ಅರ್ಜುನ ಆನೆಗೆ ನಮನ ಹಾಗೂ ಸೋಮನಾಥಪುರ ಚೆನ್ನಕೇಶವ ದೇವಾಲಯ ಸೇರಿದಂತೆ ಹಲವು ಆಕೃತಿಗಳು ನೋಡುಗರನ್ನು ಆಕರ್ಷಿಸುತ್ತಿವೆ.

ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಚಾಲನೆ: ವಿಶ್ವವಿಖ್ಯಾತ ಅಂಬಾವಿಲಾಸ ಅರಮನೆಯ ಮುಂಭಾಗದಲ್ಲಿ ಕ್ರಿಸ್ಮಸ್ ಹಾಗೂ ಹೊಸ ವರ್ಷದ ಹಿನ್ನೆಲೆಯಲ್ಲಿ ಅರಮನೆ ಆಡಳಿತ ಮಂಡಳಿ 10 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಅಂದರೆ ಮಾಗಿ ಉತ್ಸವಕ್ಕೆ ಶುಕ್ರವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.

ಈ ಫಲಪುಷ್ಪ ಪ್ರದರ್ಶನದಲ್ಲಿ ಪ್ರವಾಸಿಗರನ್ನು ಹಾಗೂ ಇಲ್ಲಿಯ ಸ್ಥಳೀಯ ನಾಗರಿಕರನ್ನು ಗಮನ ಸೆಳೆಯುತ್ತಿರುವ ಹಲವಾರು ಆಕೃತಿಗಳಿದ್ದು, ಅದರಲ್ಲಿ ಇತ್ತೀಚೆಗೆ ಕಾಡಾನೆ ದಾಳಿಯಿಂದ ಮೃತಪಟ್ಟ ಅಂಬಾರಿ ಆನೆ ಅರ್ಜುನನ ಆಕೃತಿಯೂ ಇದೆ. ಇದರ ಜೊತೆಗೆ ಇತ್ತೀಚೆಗೆ ಯುನೆಸ್ಕೋ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಸೋಮನಾಥಪುರದ ಚೆನ್ನಕೇಶವ ದೇವಾಲಯವನ್ನು ಕೆಂಗುಲಾಬಿ, ಚೆಂಡು ಹೂ, ವಿವಿಧ ಬಗೆಯ ಗುಲಾಬಿಗಳಿಂದ 50 ಅಡಿ ಅಗಲ, 20 ಅಡಿ ಉದ್ದ, 28 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದ್ದು, ಗಮನ ಸೆಳೆಯುತ್ತಿದೆ.

ಅರಮನೆ ಫಲಪುಷ್ಪ ಪ್ರದರ್ಶನದಲ್ಲಿ ನೋಡುಗರ ಮನ ಸೆಳೆಯುತ್ತಿರುವ ವಿವಿಧ ಆಕೃತಿಗಳು

ಜೊತೆಗೆ ಕಬ್ಬು, ಬಾಳೆ ತೋಟದಲ್ಲಿ ತಾಯಿ ಮತ್ತು ಮರಿ ಆನೆಗಳು, ಹುಲಿಯ ಮೇಲೆ ಕುಳಿತ ಮಹದೇಶ್ವರ, ಸಿರಿಧಾನ್ಯಗಳ ಆಕೃತಿಗಳು, ಹಂಪಿಯ ಕಲ್ಲಿನ ರಥ, ವಿರೂಪಾಕ್ಷ ಸ್ವಾಮಿ, ನಾಲ್ವಡಿ ಕೃಷ್ಣ ರಾಜ ಒಡೆಯರ್, ಕೆಂಪ ನಂಜಮ್ಮಣಿ, ಶ್ರಿಕಂಠದತ್ತ ಒಡೆಯರ್, ಮೈಸೂರು ಅರಮನೆ ಮಂಡಳಿ ಹಾಗೂ ವಿವಿಧ ರೀತಿಯ ಪ್ರಾಣಿಗಳ ಪ್ರತಿಮೆಗಳು ಕಂಡು ಬಂದವು.

ಹಣ್ಣುಗಳಿಂದ ಚಿತ್ರಿಸಿದ ಕಲಾಕೃತಿಗಳಲ್ಲಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧಿ, ಕಿತ್ತೂರು ರಾಣಿ ಚೆನ್ನಮ್ಮ, ನಾಲ್ವಡಿ ಕೃಷ್ಣರಾಜ ಒಡೆಯರ್, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿಡಿ.ಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ ಮಹದೇವಪ್ಪ ಅವರ ಆಕೃತಿಗಳು ಜನರ ಮನ ಸೆಳೆದವು. ವಿವಿಧ ರೀತಿಯ ಕಲಾಕೃತಿಗಳು, ಸ್ಪೈಡರ್ ಮ್ಯಾನ್, ಬ್ಯಾಟ್ ಮ್ಯಾನ್, ಸೂಪರ್ ಮ್ಯಾನ್ ಹೀಗೆ ಮಕ್ಕಳಿಗೆ ಪ್ರಿಯವಾಗಿರುವ ಹೂಗಳಿಂದ ಅಲಂಕೃತಗೊಂಡ ವಿವಿಧ ಕಲಾಕೃತಿಗಳು, ಸೆಲ್ಫಿ ಪಾಯಿಂಟ್, ಕ್ರಿಸ್​ಮಸ್ ಟ್ರೀಗಳು ಜನರಿಗೆ ಮುದ ನೀಡಿತು.

ಅರಮನೆ ಫಲಪುಷ್ಪ ಪ್ರದರ್ಶನದಲ್ಲಿ ನೋಡುಗರ ಮನ ಸೆಳೆಯುತ್ತಿರುವ ವಿವಿಧ ಆಕೃತಿಗಳು

ಇದರ ಜೊತೆಗೆ ಕರ್ನಾಟಕ ರಾಜ್ಯ ನಾಮಕರಣವಾದ ಸುವರ್ಣ ಮಹೋತ್ಸವದ ನಿಮಿತ್ತ ಕರ್ನಾಟಕ ಮಾದರಿ, ಶಿವಲಿಂಗ, ನೇಗಿಲ ಯೋಗಿ, ಡಾ.ರಾಜ್​ಕುಮಾರ್ ಸೇರಿದಂತೆ ಹಲವಾರು ಆಕೃತಿಗಳು ಅರಮನೆಯ ಫಲಪುಷ್ಪ ಪ್ರದರ್ಶನದಲ್ಲಿ ಗಮನ ಸೆಳೆಯುತ್ತಿದೆ. ಈ ಫಲಪುಷ್ಪ ಪ್ರದರ್ಶನದಲ್ಲಿ ನಾಲ್ಕು ಲಕ್ಷ ಹೂವುಗಳಿಂದ ವಿವಿಧ ಮಾದರಿಗಳನ್ನು ರಚಿಸಲಾಗಿದ್ದು, ಪ್ರವಾಸಿಗರಿಗೆ ಇದನ್ನು 10 ದಿನಗಳ ಕಾಲ ಕಣ್ತುಂಬಿಕೊಳ್ಳಲು ಅವಕಾಶ ನೀಡಲಾಗಿದೆ.

ಇದನ್ನೂ ಓದಿ:ಅರಮನೆ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

Last Updated : Dec 23, 2023, 7:57 PM IST

ABOUT THE AUTHOR

...view details