ನರೇಂದ್ರ ಮೋದಿಯವರನ್ನು ಮೂರನೇ ಬಾರಿ ಪ್ರಧಾನಿ ಮಾಡುವುದೇ ನಮ್ಮ ಗುರಿ : ಜಿ ಟಿ ದೇವೇಗೌಡ ಮೈಸೂರು: 21ನೇ ಶತಮಾನದಲ್ಲಿ ದೇಶವನ್ನು ಮುನ್ನಡೆಸುವ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಿಟ್ಟರೆ ಬೇರೆ ಯಾರಿಗೂ ಇಲ್ಲ. ಆದ್ದರಿಂದ ಮೂರನೇ ಬಾರಿಗೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವುದೇ ನಮ್ಮ ಒಂದೇ ಗುರಿ ಎಂದು ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ದೇಶದ ಪ್ರಧಾನಿ ಆಗುವ ಅರ್ಹತೆ ನರೇಂದ್ರ ಮೋದಿಯವರಿಗೆ ಬಿಟ್ಟರೆ ಈ ಸಂದರ್ಭದಲ್ಲಿ ಬೇರೆ ಯಾರಿಗೂ ಇಲ್ಲ. ದೇಶದ ಏಕತೆ, ಅಖಂಡತೆ, ರಕ್ಷಣೆ, ಅಭಿವೃದ್ಧಿ ನರೇಂದ್ರ ಮೋದಿಯವರಿಂದ ಮಾತ್ರ ಸಾಧ್ಯ. ಆದ್ದರಿಂದ 2024ಕ್ಕೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡುವುದೇ ನಮ್ಮ ಗುರಿ. ಈ ನಿಟ್ಟಿನಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
ನಮಗೆ ಎಷ್ಟು ಸೀಟು, ಯಾರ್ಯಾರು ಅಭ್ಯರ್ಥಿಗಳು ಎಂದು ಇನ್ನೂ ತೀರ್ಮಾನ ಆಗಿಲ್ಲ. ನಮ್ಮ ಶಕ್ತಿ ಹೆಚ್ಚಾಗಿ ಯಾವ ಕ್ಷೇತ್ರದಲ್ಲಿ ಇದೆಯೋ ಅಲ್ಲಿ ನಮ್ಮ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ. ಸದ್ಯಕ್ಕೆ ನಮಗೆ ಐದು ಕ್ಷೇತ್ರವನ್ನು ಬಿಟ್ಟುಕೊಡಲು ಒಪ್ಪಿದ್ದಾರೆ. ಅದರಲ್ಲಿ ನಮ್ಮ ಶಕ್ತಿಯು ಹೆಚ್ಚಾಗಿ ಎಲ್ಲಿದೆ ಅಲ್ಲಿ ಅಭ್ಯರ್ಥಿಗಳನ್ನು ಹಾಕಿ ಗೆಲ್ಲಿಸುತ್ತೇವೆ ಎಂದರು.
ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಕಾಂಗ್ರೆಸ್ ಟೀಕೆ ವಿಚಾರವಾಗಿ ಮಾತನಾಡಿ, ಬಿಜೆಪಿ ಜೊತೆಗಿನ ಮೈತ್ರಿಯಿಂದ ಜಾತ್ಯಾತೀತತೆ ಉಳಿದಿಲ್ಲ ಎಂಬ ಕಾಂಗ್ರೆಸ್ ಟೀಕೆ ಸರಿಯಲ್ಲ. ಸಿದ್ದರಾಮಯ್ಯ ಜೊತೆ ಕೇವಲ ಕುರುಬರು ಮಾತ್ರ ಇರುವುದಾ, ಖರ್ಗೆ ಜೊತೆ ದಲಿತರು ಮಾತ್ರ ಇರುವುದಾ? ದೇವೇಗೌಡರ ಜೊತೆ ಒಕ್ಕಲಿಗರು ಮಾತ್ರ ಇರುವುದಾ? ಹಾಗೆ ಯಡಿಯೂರಪ್ಪನವರ ಜೊತೆ ಲಿಂಗಾಯತರು ಮಾತ್ರ ಇರುವುದಾ ?. ಎಲ್ಲರೂ ಇದ್ದಾರೆ. ಇದು ಜಾತ್ಯಾತೀತತೆ ಎಂದು ಹೇಳಿದರು.
ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರಿ ಬ್ಯಾಂಕಿಗೆ ಚುನಾವಣೆಗೆ ಬಗ್ಗೆ ಮಾತನಾಡಿ, ಚುನಾವಣೆಯನ್ನು ಮುಂದೂಡಲು ಸರ್ಕಾರ ಪ್ರಯತ್ನ ಮಾಡಿತು. ನನ್ನ ಮಗ ಹಾಗೂ ಶಾಸಕ ಹರೀಶ್ ಗೌಡ ಪ್ರಬಲ ನಾಯಕನಾಗಿ ಬೆಳೆಯುತ್ತಾನೆ ಎಂದು ಹೀಗೆ ಮಾಡಿತ್ತು. ಆದರೆ ಕೋರ್ಟ್ ಚುನಾವಣೆ ನಡೆಸಲು ಸೂಚನೆ ನೀಡಿದೆ. ಇದನ್ನು ಸ್ವಾಗತಿಸುತ್ತೇನೆ ಎಂದರು.
ಬರ ನಿರ್ವಹಣೆ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, 48 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಇದರಿಂದ 38 ಸಾವಿರ ಕೋಟಿ ನಷ್ಟವಾಗಿದ್ದು, ಇಲ್ಲಿಯವರೆಗೆ 1 ರೂಪಾಯಿ ಪರಿಹಾರವನ್ನು ಸರ್ಕಾರ ನೀಡಿಲ್ಲ. ಇದರ ಜೊತೆಗೆ ಸರ್ಕಾರದ ಐದು ಗ್ಯಾರಂಟಿಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ರೈತರಿಗೆ 2 ಸಾವಿರ ಕೊಡುತ್ತೇವೆ ಎಂದು ಹೇಳಿದ್ದರು. ಆದರೆ ತಂತ್ರಾಂಶದ ಸಮಸ್ಯೆಯಿಂದ ಅದು ಸಹ ಜನರಿಗೆ ತಲುಪುತ್ತಿಲ್ಲ. ಏನೇನೋ ಕಾರಣ ಹೇಳಿ ಸರ್ಕಾರ ತಪ್ಪಿಸಿಕೊಳ್ಳುತ್ತಿದ್ದು, ಈ ಬಗ್ಗೆ ನಾಚಿಕೆಯಾಗಬೇಕು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ :ನಾವು ದ್ವೇಷ ರಾಜಕಾರಣ ಮಾಡುತ್ತಿಲ್ಲ, ಕಾನೂನು ಸುವ್ಯವಸ್ಥೆ ಕಾಪಾಡುತ್ತಿದ್ದೇವೆ: ಡಿಸಿಎಂ ಡಿಕೆಶಿ