ಮೈಸೂರು:ರಕ್ತಸ್ರಾವದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗಗಳನ್ನು ಕುಟುಂಬ ವರ್ಗದವರು ದಾನ ಮಾಡುವ ಮೂಲಕ ನಾಲ್ಕು ಜೀವಗಳಿಗೆ ಹೊಸ ಜೀವನ ನೀಡಿದ್ದಾರೆ.
ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ ನಂಜನಗೂಡು ತಾಲೂಕು ಆಲಂಬೂರು ಗ್ರಾಮದ ನಂಜುಂಡಸ್ವಾಮಿ ಎಂಬುವವರ ಪತ್ನಿ ಸವಿತಾ(40) ಸಾವಿನಲ್ಲಿಯೂ ಸಾರ್ಥಕತೆ ಮೆರೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸವಿತಾ ಫೆ. 18ರಂದು ಅಪೋಲೋ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದರು. ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಅನಾರೋಗ್ಯಕ್ಕೆ ಒಳಗಾದರು. ಎರಡು ದಿನಗಳ ಕಾಲ ವೆಂಟಿಲೇಟರ್‌ನಲ್ಲಿಡಲಾಗಿತ್ತು. ಆದರೆ ಮಾ. 19ರಂದು ಬೆಳಗ್ಗೆ ವೈದ್ಯರು ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದರು.
ಹಲವಾರು ಪರೀಕ್ಷೆಗಳಿಂದ ಅವರು ಅಂಗಾಂಗ ದಾನಕ್ಕೆ ಅರ್ಹರು ಎಂದು ಖಚಿತಪಡಿಸಲಾಯಿತು. ನಿಗದಿತ ನಿಯಮಗಳ ಪ್ರಕಾರ ಅಂಗಾಂಗ ದಾನಕ್ಕಾಗಿ ಅವರ ಕುಟುಂಬದವರಿಗೆ ಸಲಹೆ ನೀಡಲಾಯಿತು. ಈ ಸಂದರ್ಭದಲ್ಲಿ ಸವಿತಾ ಅವರ ಗಂಡ ಅಂಗಾಂಗ ದಾನ ಮಾಡಲು ಮುಂದೆ ಬಂದರು. ಬಳಿಕ ಅವರ ಕುಟುಂಬದವರ ಒಪ್ಪಿಗೆ ಪಡೆದು ಅಂಗಾಂಗಗಳನ್ನು ಪಡೆಯಲಾಯಿತು.
ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಿಂದ ಬುಧವಾರ ಸಂಜೆ ಜೀವಂತ ಹೃದಯವನ್ನು ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಬೆಂಗಳೂರಿನ ನಾರಾಯಣ ಹೃದಯಾಲಕ್ಕೆ ಸಾಗಿಸಲಾಯಿತು. ಮತ್ತೊಂದು ಆ್ಯಂಬುಲೆನ್ಸ್‌ನಲ್ಲಿ ಒಂದು ಕಿಡ್ನಿಯನ್ನು ಯಶವಂತ ಪುರದಲ್ಲಿರುವ ಸ್ಪರ್ಶ ಆಸ್ಪತ್ರೆಗೆ ರವಾನಿಸಲಾಯಿತು.
ಒಂದು ಕಿಡ್ನಿ, ಒಂದು ಯಕೃತ್‌ನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲಿಯೇ ರೋಗಿಗಳಿಗೆ ಕಸಿ ಮಾಡಲಾಗಿದೆ. ಕಾರ್ನಿಯಾಗಳನ್ನು ಮೈಸೂರಿನ ಕಣ್ಣಿನ ಬ್ಯಾಂಕ್‌ಗೆ ರವಾನಿಸಲಾಗಿದ್ದು, ಇಬ್ಬರಿಗೆ ಇದರ ಪ್ರಯೋಜನ ಸಿಗಲಿದೆ.
ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆ ಮೈಸೂರಿನಲ್ಲಿ ಬಹುಅಂಗಾಂಗ ಕಸಿ ನೆರವೇರಿಸಲು ಪರವಾನಗಿ ಪಡೆದಿರುವ ಕೇಂದ್ರವಾಗಿದೆ ಮತ್ತು ಗರಿಷ್ಠ ಸಂಖ್ಯೆಯ ಯಕೃತ್ತು ಮತ್ತು ಮೂತ್ರಪಿಂಡ ಕಸಿ ನೆರವೇರಿಸುವ ಮೂಲಕ ಈ ವಲಯದಲ್ಲಿ ಅಂಗಾಂಗ ಕಸಿಗೆ ಕಾಯುತ್ತಿರುವ ರೋಗಿಗಳ ಪಾಲಿಗೆ ಭರವಸೆಯ ಬೆಳಕು ಮೂಡಿಸಿದೆ. ಈವರೆಗೆ 300 ಅಂಗಾಂಗ ಕಸಿ ನೆರವೇರಿಸಲಾಗಿದೆ ಎಂದು ಅಪೋಲೋ ಬಿಜಿಎಸ್ ಆಸ್ಪತ್ರೆ ಉಪಾಧ್ಯಕ್ಷ ಎ. ಜಿ.ಭರತೀಶ ರೆಡ್ಡಿ ತಿಳಿಸಿದ್ದಾರೆ.
ಇದನ್ನೂ ಓದಿ:ರಸ್ತೆ ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ವ್ಯಕ್ತಿಯ ಅಂಗಾಂಗ ದಾನ