ಮೈಸೂರು : ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ಖಂಡಿಸಿ ಶುಕ್ರವಾರ ಕರ್ನಾಟಕ ಬಂದ್‌ಗೆ ಸಂಘಟನೆಗಳು ಕರೆ ಕೊಟ್ಟಿವೆ. ಹೀಗಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಹಲವು ಸಂಘಟನೆಯವರು ಬೆಂಬಲ ಸೂಚಿಸಿದ್ದಾರೆ. ಆದರೆ ನಗರ ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಅವರು ಬಂದ್‌ಗೆ ಅವಕಾಶ ಇಲ್ಲ. ಮೆರವಣಿಗೆಗೂ ಅವಕಾಶ ಇಲ್ಲ. ಕೇವಲ ಹಳೆಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಧರಣಿಗೆ ಮಾತ್ರ ಅವಕಾಶ ನೀಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೆಪ್ಟೆಂಬರ್ 29 ರಂದು ವಿವಿಧ ರಾಜಕೀಯ ಪಕ್ಷಗಳು, ಕನ್ನಡ ಒಕ್ಕೂಟ ಹಾಗೂ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿರುವುದು ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿ. ಜೊತೆಗೆ ಜನಸಾಮಾನ್ಯರ ಮೂಲಭೂತ ಹಕ್ಕುಗಳಿಗೆ ಚ್ಯುತಿ ಆಗುವುದರಿಂದ ಬಂದ್‌ಗೆ ಮೈಸೂರಿನಲ್ಲಿ ಯಾವುದೇ ರೀತಿಯ ಮೆರವಣಿಗೆಗೆ ಅವಕಾಶ ಇಲ್ಲ. ಬಲವಂತವಾಗಿ ಯಾವುದೇ ರೀತಿಯ ಬಂದ್ ಮಾಡಿಸಲು ಅವಕಾಶ ಇಲ್ಲ. ಆದ್ದರಿಂದ ರಾಜಕೀಯ ಪಕ್ಷಗಳು ಹಾಗೂ ಸಂಘಟನೆಗಳು ಹಳೆಯ ಜಿಲ್ಲಾಧಿಕಾರಿ ಕಚೇರಿಯ ಬಳಿ ಧರಣಿ ಹಮ್ಮಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ರಮೇಶ್ ಬಾನೋತ್ ಹೇಳಿದ್ದಾರೆ.
ಅಲ್ಲದೆ, ಶುಕ್ರವಾರ, ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸುವ ತೀರ್ಮಾನವನ್ನು ಮುಂದಿನ ಪರಿಸ್ಥಿತಿ ನೋಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಕಚೇರಿಯಿಂದ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹಾಗಾದರೇ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿದ ಸಂಘಟನೆಗಳು ಯಾವುವು ಎಂಬ ವಿವರವಾದ ವರದಿ ಮಾಹಿತಿ ಇಲ್ಲಿದೆ..
ಹೋಟೆಲ್ ಮಾಲೀಕರ ಸಂಘ ಬೆಳಗ್ಗೆ ತುರ್ತು ಸಭೆ ನಡೆಸಿ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಕರ್ನಾಟಕ ಬಂದ್‌ಗೆ ಮೈಸೂರು ನಗರದ ಹೋಟೆಲ್ಗಳು, ರೆಸ್ಟೋರೆಂಟ್ಗಳು, ಬೇಕರಿಗಳು, ಸ್ವೀಟ್ ಶಾಪ್ಗಳು ಫಾಸ್ಟ್ ಫುಡ್ ಟೀ ಮತ್ತು ಕಾಫಿ ಅಂಗಡಿಗಳು ಮುಚ್ಚಲಿವೆ ಹಾಗೂ ಬಂದ್‌ಗೆ ಬೆಂಬಲ ಸೂಚಿಸಲಾಗಿದೆ ಎಂದು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ನಾರಾಯಣ ಗೌಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರ ಜೊತೆಗೆ ಮೈಸೂರು ನಗರದ ಆಟೋ ಮಾಲೀಕರ ಸಂಘ ಹಾಗೂ ಆಟೋ ಚಾಲಕರ ಸಂಘ, ಲಾರಿ ಮಾಲೀಕರ ಸಂಘ, ಕನ್ನಡಪರ ಸಂಘಟನೆಗಳು, ರೈತ ಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ.