ಕರ್ನಾಟಕ

karnataka

ETV Bharat / state

ಪುತ್ರನ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸಂಚಾರ: ಹೀಗಿದೆ ರಾಜಕೀಯ ಲೆಕ್ಕಾಚಾರ..

ಸಿದ್ದರಾಮಯ್ಯ ಅವರು ಕೋಲಾರ, ಬಾದಾಮಿ ಹಾಗೂ ವರುಣಾ ಈ ಮೂರು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬ ಸುಳಿವಿತ್ತು. ಆದರೆ ಪಕ್ಷದ ಆಂತರಿಕ ಸರ್ವೇ ಪ್ರಕಾರ, ಕೋಲಾರ ಮತ್ತು ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಗೆಲುವಿನ ಬಗ್ಗೆ ಸ್ಪಷ್ಟತೆ ಇಲ್ಲ. ಹಾಗಾದ್ರೆ ಅವರ ಮುಂದಿನ ನಡೆಯೇನು?

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಯತೀಂದ್ರ ಸಿದ್ದರಾಮಯ್ಯ

By

Published : Dec 9, 2022, 4:24 PM IST

ಮೈಸೂರು: ಮುಂದಿನ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂಬ ಗೊಂದಲದಲ್ಲಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೊನೆಗೂ ಅದೃಷ್ಟದ ವರುಣಾ ಕ್ಷೇತ್ರದಿಂದಲೇ ಸ್ಫರ್ಧೆ ಮಾಡುವ ಸುಳಿವು ನೀಡಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ 2 ದಿನ ಮಗನ ಕ್ಷೇತ್ರದಲ್ಲಿ ಸಂಚಾರ ಮಾಡಿದ್ದು, ಸ್ಥಳೀಯ ವಿವಿಧ ಜಾತಿಯ ಮುಖಂಡರ ಜೊತೆ ಮಾತುಕತೆ ನಡೆಸಿದ್ದಾರೆ. ಸ್ಥಳೀಯ ಮುಖಂಡರು ಕೂಡಾ ಈ ಬಾರಿ ವರುಣಾದಿಂದಲೇ ಸ್ಪರ್ಧೆ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ ಎಂದು ತಿಳಿದುಬಂದಿದೆ.

ಸಿದ್ದರಾಮಯ್ಯ ಅವರು ಕೋಲಾರ, ಬಾದಾಮಿ ಹಾಗೂ ವರುಣಾ ಈ ಮೂರು ಕ್ಷೇತ್ರಗಳಲ್ಲಿ ಎಲ್ಲಾದರೂ ಸ್ಪರ್ಧೆ ಮಾಡುತ್ತಾರೆ ಎಂಬ ಸುಳಿವಿತ್ತು. ಆದರೆ ಪಕ್ಷದ ಆಂತರಿಕ ಸರ್ವೇ ಪ್ರಕಾರ, ಕೋಲಾರ ಮತ್ತು ಬಾದಾಮಿ ಎರಡೂ ಕ್ಷೇತ್ರಗಳಲ್ಲಿ ಗೆಲುವಿನ ಬಗ್ಗೆ ಸ್ಪಷ್ಟತೆ ಇಲ್ಲ. ಇದರಿಂದಾಗಿ ಕೊನೆಗೆ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ಚರ್ಚಿಸಿ ಕೊನೆಗೆ ತಮ್ಮ ಕೊನೆ ಚುನಾವಣೆಯನ್ನು ವರುಣಾದಿಂದಲೇ ಸ್ಪರ್ಧೆ ಮಾಡುವ ತೀರ್ಮಾನಕ್ಕೆ ಬಂದಂತೆ ಕಾಣುತ್ತಿದೆ.

ಎರಡು ಬಾರಿ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಸಿದ್ದರಾಮಯ್ಯ ಮೊದಲ ಬಾರಿಗೆ ಗೆದ್ದಾಗ ವಿರೋಧ ಪಕ್ಷದ ನಾಯಕರಾಗಿದ್ದರು. ಎರಡನೇ ಬಾರಿ ಗೆದ್ದಾಗ ಮುಖ್ಯಮಂತ್ರಿ ಆಗಿ 5 ವರ್ಷ ಪೂರೈಸಿದ್ದರು. ಕಳೆದ ಬಾರಿ ಪುತ್ರ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಕ್ಷೇತ್ರ ಬಿಟ್ಟುಕೊಟ್ಟು ತಾವು ರಾಜಕೀಯ ಪುನರ್ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಬಾರಿ ಅಂತರದಿಂದ ಸೋಲು ಅನುಭವಿಸಿದರು. ಆದರೆ, ಬಾದಾಮಿ ಕ್ಷೇತ್ರದಿಂದ ಅಲ್ಪಮತದ ಅಂತರದಲ್ಲಿ ಗೆಲುವು ಸಾಧಿಸಿದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ ಮಾತು

ಈ ಬಾರಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಕುತೂಹಲದ ಮಧ್ಯೆ ನಿನ್ನೆ ವರುಣಾ ಕ್ಷೇತ್ರದ ಹಲವು ಗ್ರಾಮಗಳಿಗೆ ಬೇಟಿ ಕೊಟ್ಟು ಮಗನ ಕ್ಷೇತ್ರದಲ್ಲಿ ಕೆಲವು ಉದ್ಘಾಟನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಇಂದು ಸಹ ವರುಣಾ ಕ್ಷೇತ್ರದ ಹಲವು ಗ್ರಾಮಗಳಿಗೆ ಭೇಟಿ ನೀಡಿ ಹುಟ್ಟೂರು ಸಿದ್ಧರಾಮನ ಹುಂಡಿಯ ನೂತನ ಹಾಲು ಶೀಥಿಲೀಕರಣ ಘಟಕದ ಉದ್ಘಾಟನೆಯಲ್ಲಿ ಭಾಗವಹಿಸಿದರು. ಈ ಎರಡು ದಿನದ ವರುಣಾ ಕ್ಷೇತ್ರದ ಭೇಟಿಯ ಸಂದರ್ಭದಲ್ಲಿ ಹಲವು ಮುಖಂಡರನ್ನು ಭೇಟಿಯಾಗಿ ಮುಂದಿನ ಸ್ಪರ್ಧೆ ವರುಣದಿಂದಲೇ. ಈ ಬಾರಿ ನನ್ನನ್ನು ಆಯ್ಕೆ ಮಾಡುವಂತೆ ಸ್ವತಃ ಸಿದ್ದರಾಮಯ್ಯ ನವರೇ ಮುಖಂಡರಿಗೆ ಮನವಿ ಮಾಡಿರುವ ಬಗ್ಗೆ ಮೂಲಗಳು ಖಚಿತಪಡಿಸಿವೆ.

ಯತೀಂದ್ರ ಸಿದ್ದರಾಮಯ್ಯ ಭವಿಷ್ಯವೇನು?:ವರುಣಾ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ, ತಂದೆಗೆ ವರುಣಾದಿಂದಲೇ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದು, ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಿಲ್ಲ, ತಂದೆಯ ಗೆಲುವಿಗಾಗಿ ಕೆಲಸ ಮಾಡುತ್ತೇನೆ ಎಂದಿದ್ದಾರೆ. ಆದರೆ, ತಮ್ಮ ಮಗನ ಭವಿಷ್ಯದ ಬಗ್ಗೆ ಯೋಚಿಸಿರುವ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರ ಅಥವಾ ಮುಂದಿನ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿಸುವ ಬಗ್ಗೆ ಯೋಚನೆ ಮಾಡಿದ್ದಾರೆ. ಆದರೆ ಯತೀಂದ್ರ ಸಿದ್ದರಾಮಯ್ಯ ತಂದೆಯ ಗೆಲುವಿನ ಬಗ್ಗೆ ಮಾತ್ರ ಯೋಚನೆ ಮಾಡುತ್ತಿದ್ದಾರೆ.

'ಸಿದ್ದರಾಮಯ್ಯ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಅವರು ಈ ಬಾರಿ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದರೆ, ಜನರೇ ಅವರನ್ನು ಗೆಲ್ಲಿಸುತ್ತಾರೆ. ಇಲ್ಲಿ ಯಾವುದೇ ತಂತ್ರ-ಕುತಂತ್ರ ನಡೆಯುವುದಿಲ್ಲ, ಸಿದ್ದರಾಮಯ್ಯ ಗೆದ್ದೇ ಗೆಲ್ಲುತ್ತಾರೆ' ಎಂದು ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಟ್ಟಸ್ವಾಮಿ ಹೇಳಿದರು.

ಇದನ್ನೂ ಓದಿ:ತಂದೆಗಾಗಿ ವರುಣ ಕ್ಷೇತ್ರ ಬಿಡಲು ಸಿದ್ಧ.. ಶಾಸಕ ಯತೀಂದ್ರ ಸಿದ್ದರಾಮಯ್ಯ ಘೋಷಣೆ

ABOUT THE AUTHOR

...view details