ಮೈಸೂರು: ಮುಂದಿನ ಚುನಾವಣೆಯಲ್ಲಿ ಬಡವರ ವಿರೋಧಿ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಿ, ಕಾಂಗ್ರೆಸ್ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ. ನೂರಕ್ಕೆ ನೂರರಷ್ಟು ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಓದಿ: ರಾಜ್ಯದಲ್ಲಿ ಮತ್ತೆ ರೂಪಾಂತರಿ ಕೊರೊನಾ ಭೀತಿ: ವಿದೇಶಿ ಪ್ರಜೆಗಳ ಮೇಲೆ ಕಟ್ಟೆಚ್ಚರ
ಇಂದು ಹುಣಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಡವರಿಗೆ ಅಕ್ಕಿ ಬೇಕು ಅಂದರೆ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಿ. ನಮ್ಮನ್ನು ಅಧಿಕಾರಕ್ಕೆ ತನ್ನಿ. ಮೈಸೂರಿನ ಎಲ್ಲಾ ಸ್ಥಾನಗಳನ್ನು ನಾವೇ ಗೆಲ್ಲಬೇಕು ಎಂದರು. ಇಂದು ರಾಜ್ಯದಲ್ಲಿ ಅನೈತಿಕ ಸರ್ಕಾರ ಅಧಿಕಾರದಲ್ಲಿ ಇದೆ. ಯಡಿಯೂರಪ್ಪ ಕೋಟ್ಯಂತರ ರೂಪಾಯಿ ಹಣ ಕೊಟ್ಟು ಎಂಎಲ್ಎಗಳನ್ನು ಕುರಿ, ಮೇಕೆ, ಎಮ್ಮೆಗಳನ್ನು ಸಂತೆಯಲ್ಲಿ ಕೊಂಡುಕೊಂಡ ರೀತಿಯಲ್ಲಿ ಕೊಂಡುಕೊಂಡಿದ್ದಾರೆ. ಆ ಮೂಲಕ ಆಪರೇಶನ್ ಕಮಲ ಹುಟ್ಟು ಹಾಕಿದ್ದೇ ಯಡಿಯೂರಪ್ಪ ಎಂದು ಟೀಕಿಸಿದರು.
ಇನ್ನು ರಾಜ್ಯದಲ್ಲಿ ಡಕೋಟಾ ಸರ್ಕಾರವಿದ್ದು, ಸರ್ಕಾರ ಟೇಕ್ ಆಫ್ ಆಗಿಲ್ಲ. ಡಕೋಟಾ ಬಸ್ ಓಡಿಸಲು ಆಗುತ್ತಿಲ್ಲ, ಯಡಿಯೂರಪ್ಪನವರಿಗೆ ನೀಡಿದ್ದಾರೆ. ಅದನ್ನು ತೋರಿಸಲು ಆಗುತ್ತಿಲ್ಲ. ಅದಕ್ಕೆ ರಾಜ್ಯವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಕಿಡಿಕಾರಿದರು.
ಯಡಿಯೂರಪ್ಪ ವಿರುದ್ಧ ಏಕವಚನದಲ್ಲೇ ವಾಗ್ದಾಳಿ:
ಇದ್ದಿದ್ದು ಇದ್ದಂಗೆ ಹೇಳಿದ್ರೆ ಎದ್ದು ಬಂದು ಎದೆಗೆ ಹೊದ್ದಂಗೆ ಆಗಿದೆ ಯಡಿಯೂರಪ್ಪನ ಸ್ಥಿತಿ. ಸಾಲ ಮನ್ನ ಮಾಡುತ್ತೇವೆ ಎಂದು ಮಹಿಳೆಯರ ಮೂಗಿಗೆ ತುಪ್ಪ ಸವರಿದರು. ಆದರೆ ತುಪ್ಪ ತಿನ್ನದೆ ಬರೀ ವಾಸನೆ ತಗೋಬೇಕು. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ, ಎಣ್ಣೆ ಬೆಲೆ ಹೆಚ್ಚಾಗಿದೆ. ಮೋದಿ...ಮೋದಿ..ಮೋದಿ... ಅಂತಾರೆ.
ರಾಮ ಮಂದಿರ ಕಟ್ಟಲು 1.5 ಸಾವಿರ ಕೋಟಿ ರೂಪಾಯಿ ಕಲೆಕ್ಟ್ ಮಾಡ್ತಿದ್ದಾರೆ. ಧರ್ಮದ ಹೆಸರಲ್ಲಿ ಜಾತಿ ಒಡೆಯುವ ಕೆಲಸ ಮಾಡಬಾರದು. ನಾನು ರಾಮನ ವಿರೋಧಿ ಅಲ್ಲ. ನೀವು ಸುಭಾಷ್ ಚಂದ್ರ ಬೋಸ್ ಹಿಂದುತ್ವ ಹೇಳುತ್ತೀರಿ. ನಾನು ಮಹತ್ವ ಗಾಂಧಿ ಹಿಂದುತ್ವ ಹೇಳುತ್ತೇನೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.