ಮೈಸೂರು: ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ಪಡೆಯುವ (40 Percent Government) ಸರ್ಕಾರವಿದೆ. ರಾಜ್ಯಪಾಲರು ಇಂತಹ ಸರ್ಕಾರವನ್ನು ವಜಾ ಮಾಡುವಂತೆ ಪತ್ರ ಬರೆಯುತ್ತೇನೆ (Letter to the Governor) ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Opposition leader Siddaramaiah) ಹೇಳಿದ್ದಾರೆ.
ಇಂದು ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಒಂದು ಕಾಮಗಾರಿ ತೆಗೆದುಕೊಳ್ಳಬೇಕಾದರೆ ಮಂತ್ರಿಗಳಿಗೆ, ಎಂಎಲ್ಎಗಳಿಗೆ 40 ಪರ್ಸೆಂಟ್ ಕಮಿಷನ್ ಕೊಡಬೇಕಾಗಿದೆ ಎಂದು ಗುತ್ತಿಗೆದಾರರ ಸಂಘ (Contractors Association) ಪ್ರಧಾನಿ ಅವರಿಗೆ ಪತ್ರ ಬರೆದಿದೆ ಎಂದರು.
ಇಷ್ಟೊಂದು ಕಮಿಷನ್ ತೆಗೆದುಕೊಳ್ಳುವ ಸರ್ಕಾರವನ್ನು ನನ್ನ ಜೀವಮಾನದಲ್ಲಿ ನೋಡಿಲ್ಲ. ಅವರುಗಳು ಗ್ರಾಮೀಣಾಭಿವೃದ್ಧಿ, ಮೈನರ್ ಇರಿಗೇಷನ್, ಮೇಜರ್ ಇರಿಗೇಷನ್, ಮೀಡಿಯಂ ಇರಿಗೇಷನ್, ಲೋಕೋಪಯೋಗಿ, ನಗರಾಭಿವೃದ್ಧಿ ಸೇರಿದಂತೆ ಎಲ್ಲಾ ಇಲಾಖೆಯಲ್ಲೂ ಲಂಚ, ಕಮಿಷನ್ ಎಂದು ಬಾಯಿ ಬಿಟ್ಟು ನಿಂತಿದ್ದಾರೆ.
ನಮಗೆ ಕೆಲಸ ಮಾಡಲು ಆಗುತ್ತಿಲ್ಲ. ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಯಾವ ಯಾವ ಇಲಾಖೆಯಲ್ಲಿ ಎಷ್ಟೆಷ್ಟು ಕಮಿಷನ್ ನಡೆಯುತ್ತದೆ ಎಂಬ ವಿವರವುಳ್ಳ ಪತ್ರವನ್ನು ಕಂಟ್ರ್ಯಾಕ್ಟರ್ ಅಸೋಸಿಯೇಷನ್ ಅವರು ಪ್ರಧಾನಿಗೆ ಬರೆದಿದ್ದಾರೆ. ಹೀಗಿರುವಾಗ, ಈ ಸರ್ಕಾರ ನೈತಿಕವಾಗಿ ಉಳಿಯಲು ಅಧಿಕಾರ ಇದೆಯೇ? ಇಲ್ಲದಿದ್ದರೆ ರಾಜೀನಾಮೆ ಕೊಟ್ಟು ಹೋಗಬೇಕು ಎಂದರು.