ಮೈಸೂರು:ಬಿಜೆಪಿ ಸರ್ಕಾರಕ್ಕೆ ಒಂಬತ್ತು ತಿಂಗಳಷ್ಟೇ ಆಯಸ್ಸು. ಒಂಬತ್ತು ತಿಂಗಳ ಬಳಿಕ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಹೆಚ್ ಡಿ ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗ್ತಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ.
ಪರಿಷತ್ ಟಿಕೆಟ್ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ: ವಿಧಾನ ಪರಿಷತ್ ಟಿಕೆಟ್ ವಿಚಾರವಾಗಿ ಯಾವುದೇ ಗೊಂದಲ ಇಲ್ಲ. ಪಕ್ಷದ ವರಿಷ್ಠ ಹೆಚ್ ಡಿ ದೇವೇಗೌಡರು, ನಾನು, ಕುಮಾರಸ್ವಾಮಿ ಎಲ್ಲರೂ ಸೇರಿ ಚರ್ಚೆ ಮಾಡಿ ಟಿಕೆಟ್ ಕೊಟ್ಟಿದ್ದೇವೆ. ನಾನು ಯಾವುದೇ ಟಿಕೆಟ್ ಆಕಾಂಕ್ಷಿಯಲ್ಲ, ಕೊಡುವ ಕೆಲಸವನ್ನಷ್ಟೇ ಮಾಡುವುದು ನನ್ನ ಕೆಲಸ ಎಂದು ಇಬ್ರಾಹಿಂ ಹೇಳಿದ್ದಾರೆ.
ಮುಂದಿನ ಬಾರಿ ಬಿಜೆಪಿ ಅಧಿಕಾರಕ್ಕೆ ಬರುತ್ತಾ ಎಂದು ಪ್ರಶ್ನೆ ಹಾಕಿ:ಮಳಲಿ ಮಸೀದಿಯ ತಾಂಬೂಲ ಪ್ರಶ್ನೆ ವಿಚಾರವಾಗಿ ಮಾತನಾಡಿದ ಇಬ್ರಾಹಿಂ, ಮುಂದಿನ ಬಾರಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತಾ?. ರಾಜ್ಯದಲ್ಲಿ ಏನಾಗುತ್ತೆ, ಮೋದಿ ಏನಾಗುತ್ತಾರೆ ಎಂದು ಪ್ರಶ್ನೆ ಹಾಕಿ ಎಂದು ವ್ಯಂಗ್ಯವಾಡಿದ್ದಾರೆ. ಸಮಾಜದಲ್ಲಿ ಅಶಾಂತಿಯನ್ನು ಸೃಷ್ಟಿಸಲು ಬಿಜೆಪಿ ಹೀಗೆ ಮಾಡುತ್ತಿದೆ. ಹಿಜಾಬ್, ಹಲಾಲ್ ಆಯ್ತು. ಇದೀಗ ಮತ್ತೊಂದು ತಂದಿದ್ದಾರೆ. ಬಸವಣ್ಣನವರ ನಾಡಿನಲ್ಲಿ ಇದೆಲ್ಲಾದಕ್ಕೂ ಆಸ್ಪದ ಇಲ್ಲ. ಮುಮ್ಮಡಿ ಕೃಷ್ಣರಾಜ ಒಡೆಯರ್ ಮುಸ್ಲಿಂ ಹೆಣ್ಣು ಮಕ್ಕಳಿಗೆ ಪರದೆಯ ಜಟಕಾಗಾಡಿ ನೀಡಿದ್ದರು. ಶಾಲೆಗೆ ಹೋಗಲು ಪರದೆಯ ಗಾಡಿಗಳನ್ನು ಬಳಸಲಾಗುತ್ತಿತ್ತು ಎಂದು ಹೇಳಿದರು.
ಮಂಗನ ಕೈಗೆ ಮಾಣಿಕ್ಯ ಸಿಕ್ಕ ಹಾಗಾಗಿದೆ: ಇದು ಈ ಹುಚ್ಚು ಮುಂಡೇದು ಪ್ರತಾಪ್ ಸಿಂಹನಿಗೆ ಗೊತ್ತಿಲ್ಲ. ಮಂಗನ ಕೈಗೆ ಮಾಣಿಕ್ಯ ಸಿಕ್ಕ ಹಾಗಾಗಿದೆ. ಸಿದ್ದರಾಮಯ್ಯನ ತಪ್ಪಿನಿಂದ ಪ್ರತಾಪ್ ಸಿಂಹ ಎರಡು ಬಾರಿ ಎಂಪಿ ಆಗಿದ್ದಾರೆ. ಈಗ ಟಿಪ್ಪುಸುಲ್ತಾನ್ಗೂ ಕೃಷ್ಣರಾಜ ಒಡೆಯರ್ಗೂ ತಂದಿಡುವ ಕೆಲಸವನ್ನ ಮಾಡುತ್ತಿದ್ದಾರೆ. ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನ್ ಶಾಸನ, ಸಮಾಧಿ ಇದೆ. ಅದನ್ನ ಕೃಷ್ಣರಾಜ ಒಡೆಯರ್ ಕಾಪಾಡಿಕೊಂಡು ಬಂದಿದ್ದರು. ರಾಜರಲ್ಲಿ ಒಳ್ಳೆಯ ಸಂಬಂಧ ಇತ್ತು. ಇವರು ಅದನ್ನ ಹಾಳು ಮಾಡುತ್ತಿದ್ದಾರೆ. ಹಿಂದುಳಿದ ವರ್ಗಗಳಿಗೆ ಕೃಷ್ಣರಾಜ ಒಡೆಯರ್ ಅನೇಕ ಕೊಡುಗೆ ನೀಡಿದ್ದಾರೆ. ಅವರನ್ನು ಕೂಡ ಸ್ಮರಿಸುವ ಕೆಲಸವನ್ನ ಮಾಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದ್ರು.