ಕರ್ನಾಟಕ

karnataka

ETV Bharat / state

ಮೈಸೂರಿನ ಪ್ರವಾಸಿ ತಾಣಗಳಿಗೆ ಆನ್‍ಲೈನ್ ಟಿಕೆಟ್ ಜಾರಿಗೆ ಚಿಂತನೆ - City Pass and Single Ticketing System in association with Book My Show App

ಮೈಸೂರಿನ ವಿವಿಧ ಪ್ರವಾಸಿ ತಾಣಗಳಿಗೆ ದೇಶ, ವಿದೇಶದಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆಯು ಬುಕ್​ ಮೈ ಶೋ ಆ್ಯಪ್ ಸಹಯೋಗದಲ್ಲಿ ಸಿಟಿ ಪಾಸ್ ಹಾಗೂ ಸಿಂಗಲ್ ಟಿಕೆಟಿಂಗ್ ಸಿಸ್ಟಮ್ ಜಾರಿ ಮಾಡಲು ಉದ್ದೇಶಿಸಿದೆ.

ಆನ್‍ಲೈನ್ ಟಿಕೆಟ್ ಜಾರಿಗೆ ಚಿಂತನೆ
ಆನ್‍ಲೈನ್ ಟಿಕೆಟ್ ಜಾರಿಗೆ ಚಿಂತನೆ

By

Published : Feb 18, 2020, 11:02 PM IST

ಮೈಸೂರು: ಮೈಸೂರು ನಗರವು ಪ್ರವಾಸಿಗರ ನೆಚ್ಚಿನ ತಾಣವಾಗಿದ್ದು, ನಗರದ ವಿವಿಧ ಪ್ರವಾಸಿ ತಾಣಗಳಿಗೆ ವಿವಿಧ ರಾಜ್ಯಗಳು ಮತ್ತು ವಿದೇಶಗಳಿಂದ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪ್ರವಾಸೋದ್ಯಮ ಇಲಾಖೆಯು ಬುಕ್ ಮೈ ಶೋ ಆ್ಯಪ್ ಸಹಯೋಗದಲ್ಲಿ ಸಿಟಿ ಪಾಸ್ ಹಾಗೂ ಸಿಂಗಲ್ ಟಿಕೆಟಿಂಗ್ ಸಿಸ್ಟಮ್ ಜಾರಿ ಮಾಡಲು ಉದ್ದೇಶಿಸಿದೆ.

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಅಧ್ಯಕ್ಷತೆಯಲ್ಲಿ ಮಂಗಳವಾರ ಈ ಬಗ್ಗೆ ಚರ್ಚೆ ನಡೆಸಲಾಯಿತು. ನಗರದ ಹೋಟೆಲ್ ಮೈಯೂರದಲ್ಲಿ ನಡೆದ ಸಭೆಯಲ್ಲಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ಮಾತನಾಡಿ, ಆನ್‍ಲೈನ್ ಟಿಕೆಟ್ ಜಾರಿ ಮಾಡುವುದರಿಂದ ಪ್ರವಾಸಿಗರಿಗೆ ಹೆಚ್ಚಿನ ಮಟ್ಟದಲ್ಲಿ ಅನುಕೂಲವಾಗಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಈ ನಿಟ್ಟಿನಲ್ಲಿ ನಗರದ ಅನೇಕ ಪ್ರವಾಸಿ ತಾಣಗಳಿಗೆ ಆನ್‍ಲೈನ್ ಟಿಕೆಟ್ ಸೇವೆಯನ್ನು ಜಾರಿ ಮಾಡಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಮೈಸೂರಿನ ಪ್ರಮುಖ ಪ್ರವಾಸಿ ತಾಣಗಳಾದ ಚಾಮುಂಡಿಬೆಟ್ಟ, ಸೆಂಟ್‍ಫಿಲೋಮಿನಾ ಚರ್ಚ್, ಅರಮನೆ, ಸ್ಯಾಂಡ್ ಮ್ಯೂಸಿಯಂ, ವ್ಯಾಕ್ಸ್ ಮ್ಯೂಸಿಯಂ, ರೈಲ್ವೆ ಮ್ಯೂಸಿಯಂ, ಲಲಿತ ಮಹಲ್ ಪ್ಯಾಲೇಸ್, ಮೃಗಾಲಯ, ಕಾರಂಜಿ ಕೆರೆ ಮುಂತಾದ ಪ್ರವಾಸಿ ತಾಣಗಳಲ್ಲಿ ಆನ್‍ಲೈನ್ ಟಿಕೆಟ್ ವ್ಯವಸ್ಥೆ ಕಲ್ಪಿಸಿ, ಸ್ಥಳಗಳನ್ನು ವೀಕ್ಷಿಸಲು ಸುಲಭವಾಗುವಂತೆ ಮಾಡಬೇಕು ಎಂದು ಮಾಹಿತಿ ನೀಡಿದರು.

ನಾಡಹಬ್ಬ ಮೈಸೂರು ದಸರಾದಲ್ಲಿ ಪ್ರವಾಸಿಗರು ನಗರದಲ್ಲಿರುವ ಎಲ್ಲಾ ಪ್ರವಾಸಿ ತಾಣಗಳನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ. ಅಲ್ಲದೆ, ಜಂಬೂಸವಾರಿ ಮೆರವಣಿಗೆ ಹಾಗೂ ಪಂಜಿನ ಕವಾಯತು ಮೈದಾನದಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಲು ಕೂಡಾ ವಿದೇಶಿಗರಿಗೆ ಟಿಕೆಟ್ ದೊರೆಯುವುದಿಲ್ಲ. ಈ ನಿಟ್ಟಿನಲ್ಲಿ ವಿದೇಶಿ ಪ್ರವಾಸಿಗರಿಗಾಗಿಯೇ ಸ್ವಲ್ಪ ಟಿಕೆಟ್ ಮೀಸಲಿಡಬೇಕು ಎಂದು ಹೇಳಿದರು. ದಸರಾ ಹಬ್ಬಕ್ಕೆ ಈಗಿನಿಂದಲೇ ಸಭೆ ಸೇರಿ ಪೂರ್ವ ಸಿದ್ಧತಾ ಕ್ರಮಗಳನ್ನು ಕೈಗೊಂಡು, ದಸರಾ ಸಮೀಪದಲ್ಲಿ ಪ್ರಚಾರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರವಾಸೋದ್ಯಮ ಸಚಿವರು ಸೂಚಿಸಿದ್ದಾರೆ. ನಗರಕ್ಕೆ ಆಗಮಿಸುವ ಪ್ರವಾಸಿಗರಿಗೆ ಪೂರಕವಾಗುವಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ಇನ್ನು ಮುಂಬರುವ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಹೆಚ್ಚಿನ ಯೋಗ ಪಟುಗಳೊಂದಿಗೆ ಆಚರಿಸಲು ಪೂರ್ವ ಸಿದ್ಧತೆ ಮಾಡಲಾಗಿದ್ದು, ಹೆಚ್ಚಿನ ಮಟ್ಟದಲ್ಲಿ ಪ್ರಚಾರ ಮಾಡುವ ಮೂಲಕ ಯೋಗ ದಿನಾಚರಣೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕರೆ ನೀಡಿದ್ರು.

For All Latest Updates

TAGGED:

ABOUT THE AUTHOR

...view details