ಮೈಸೂರು : ಒಂದು ವರ್ಷದ ಗಂಡು ಹುಲಿಮರಿಯೊಂದು ಮತ್ತೊಂದು ಹುಲಿಯ ದಾಳಿಗೆ ಸಿಲುಕಿ, ಸಾವನ್ನಪ್ಪಿರುವ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ತಾಲ್ಲೂಕಿನ ಡಿ ಬಿ ಕುಪ್ಪೆ ವನ್ಯಜೀವಿ ವಲಯದಲ್ಲಿ ನಡೆದಿದೆ.
ಹೆಚ್ ಡಿ ಕೋಟೆ ತಾಲೂಕಿನ ಡಿ ಬಿ ಕುಪ್ಪೆ ವನ್ಯಜೀವಿ ವ್ಯಾಪ್ತಿಯ ಮಾಸ್ತಿಗುಡಿ ಗಸ್ತಿನ ಕುಂಬಳಗೊಲ್ಲಿ ಅರಣ್ಯ ಪ್ರದೇಶದಲ್ಲಿ ಹುಲಿ ಮರಿಯೊಂದರ ಕಳೇಬರ ಪತ್ತೆಯಾಗಿದ್ದು, ಹುಲಿಮರಿಯ ಮೃತದೇಹದಲ್ಲಿ ಗಾಯದ ಗುರುತುಗಳು ಕಂಡು ಬಂದಿರುವುದರಿಂದ ಹುಲಿಯೂ ಮತ್ತೊಂದು ಹುಲಿಯ ದಾಳಿಯಿಂದ ಗಾಯಗೊಂಡಿದ್ದು, ಎದೆಗೂಡಿನ 12 ಮತ್ತು 13ರ ನಡುವಿನ ಮೂಳೆ ಮುರಿದಿದ್ದರಿಂದ ಬೆನ್ನುಹುರಿ ಹಾನಿಯಾಗಿ ಎದೆಗೂಡಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ಇದರಿಂದ ರಕ್ತಸ್ರಾವವಾಗಿದ್ದ ಹುಲಿಮರಿಯೂ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯಾಧಿಕಾರಿ ಹೆಚ್ ರಮೇಶ್ ಮಾಹಿತಿ ನೀಡಿದ್ದಾರೆ.
ಬಳಿಕ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಮಾರ್ಗಸೂಚಿಯ ವಿಧಾನದಂತೆ ಮರಣೋತ್ತರ ಪರೀಕ್ಷೆಯ ನಂತರ ಮೃತದೇಹಕ್ಕೆ ಅಗ್ನಿಸ್ಪರ್ಶ ಮಾಡಲಾಯಿತು. ಇದೇ ವೇಳೆ ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಫ್ ಕೆ. ಎನ್ ರಂಗಸ್ವಾಮಿ, ಎನ್‌ಟಿಸಿಎ ನಾಮನಿರ್ದೇಶಿತ ಸದಸ್ಯ ದಿವ್ಯ ಚೌಧರಿ, ಮುಖ್ಯ ವನ್ಯಜೀವಿ ಪರಿಪಾಲಕರಿಂದ ನಾಮನಿರ್ದೇಶಿತ ಸದಸ್ಯ ಶ್ರೇಯಸ್ ದೇವನೂರು, ಡಿ. ಬಿ ಕುಪ್ಪೆ ವಲಯಾರಣ್ಯಧಿಕಾರಿ ಕೆ. ಎಲ್ ಮಧು ಡಿಆರ್‌ಎಫ್‌ಒ ಪ್ರಮೋದ್ ಸಿಬ್ಬಂದಿ ಉಮೇಶ್ ನಾಯಕ್ ಮುಂತಾದವರು ಹಾಜರಿದ್ದರು.
ಇದನ್ನೂ ಓದಿ :10 ವರ್ಷಗಳಲ್ಲಿ 270 ಹುಲಿ ಸಾವು: 'ಹುಲಿ ರಾಜ್ಯ' ಪಟ್ಟ ಕಳೆದುಕೊಳ್ಳುತ್ತಾ ಮಧ್ಯಪ್ರದೇಶ?
ಕಾದಾಟದಲ್ಲಿ ಹುಲಿ ಸಾವು: ಅಂತರಸಂತೆ ವನ್ಯಜೀವಿ ವಲಯ ಹುಲಿಗಳ ವೀಕ್ಷಣೆಗೆ ನೆಚ್ಚಿನ ತಾಣವಾಗಿದ್ದು, ಹಲವಾರು ಪ್ರವಾಸಿಗರನ್ನು ಸೆಳೆಯುತ್ತಿದೆ. ಆದರೆ ಈ ವಲಯದಲ್ಲಿ ಇತ್ತೀಚಿಗಿನ ದಿನಗಳಲ್ಲಿ ಹುಲಿಗಳು ಸಾವನ್ನಪ್ಪುತ್ತಿವೆ. ಅಂತರಸಂತೆ ವನ್ಯಜೀವಿ ವಲಯದ ತಾರಕ ಶಾಖೆಯ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಎರಡು ಹುಲಿಗಳ ಮಧ್ಯೆ ಕಾದಾಟ ನಡೆದು ಗಂಡು ಹುಲಿಯೊಂದು (ನವೆಂಬರ್ 28 -2022 ರಂದು) ಮೃತಪಟ್ಟಿತ್ತು.