ಮೈಸೂರು :ಮೈಸೂರಲ್ಲಿ ಓಮಿಕ್ರೋನ್ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಗೋಷ್ಠಿ ನಡೆಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಸರ್ಕಾರದ ಹೊಸ ಮಾರ್ಗಸೂಚಿಯಂತೆ ಕೇರಳ ಹಾಗೂ ಮಹಾರಾಷ್ಟ್ರದಿಂದ ಆಗಮಿಸುವವರಿಗೆ 72 ಗಂಟೆಯೊಳಗೆ ಮಾಡಿಸಿರುವ ಆರ್ಟಿಪಿಸಿಆರ್ ವರದಿ ಕಡ್ಡಾಯಗೊಳಿಸಲಾಗಿದೆ ಎಂದರು.
ಈ ನಿಯಮವನ್ನು ಮೈಸೂರು ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ಅನುಸರಿಸಿಕೊಂಡು ಬರುತ್ತಿದ್ದೇವೆ. ನವೆಂಬರ್ 12 ರಿಂದ 25ರೊಳಗೆ ಜಿಲ್ಲೆಗೆ ಕೇರಳ ಹಾಗೂ ಮಹಾರಾಷ್ಟ್ರದಿಂದ ಬಂದಿರುವವರಿಗೆ 15 ದಿನದ ನಂತರ ಇನ್ನೊಮ್ಮೆ ಆರ್ಟಿಪಿಸಿಆರ್ ಟೆಸ್ಟ್ ಮಾಡುವಂತೆ ಸರ್ಕಾರದಿಂದ ಆದೇಶ ಬಂದಿದೆ. ಈಗಾಗಲೇ ಟೆಸ್ಟ್ ಮಾಡಲು ಪ್ರಾರಂಭಿಸಿದ್ದೇವೆ ಎಂದಿದ್ದಾರೆ.
ಕೇರಳ ಹಾಗೂ ಮಹಾರಾಷ್ಟ್ರದಿಂದ ಬರುವ ವಿದ್ಯಾರ್ಥಿಗಳು 72 ಗಂಟೆಯೊಳಗೆ ಮಾಡಿಸಿದ ಆರ್ಟಿಪಿಸಿಆರ್ ವರದಿ ತರಬೇಕು. 7 ದಿನಗಳಾದ ಬಳಿಕ ಮತ್ತೊಮ್ಮೆ ಅವರಿಗೆ ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಲಾಗುವುದು. ಸೋಂಕಿತರ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕದಲ್ಲಿರುವವರ ಸ್ಥಳವನ್ನು ಕಂಟೈನ್ಮೆಂಟ್ ಝೋನ್ ಎಂದು ಘೋಷಿಸಲಾಗುವುದು ಎಂದು ಮಾಹಿತಿ ನೀಡಿದರು.
ಶೇ.35ರಷ್ಟು ಸೆಕೆಂಡ್ ಡೋಸ್ ಲಸಿಕೆ ಬಾಕಿ :ಜಿಲ್ಲೆಯಲ್ಲಿ ಶೇ.35ರಷ್ಟು ಸೆಕೆಂಡ್ ಡೋಸ್ ಲಸಿಕೆ ಹಾಕಿಸಿಕೊಳ್ಳುವುದು ಬಾಕಿ ಇದೆ. ಸಾರ್ವಜನಿಕರು ಲಸಿಕೆ ಹಾಕಿಸಿಕೊಂಡು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟ ಶೇ. 92.81ರಷ್ಟು ಮಂದಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.
ಶೇ.64.63ರಷ್ಟು ಸೆಕೆಂಡ್ ಡೋಸ್ ಪಡೆದಿದ್ದಾರೆ. ಅದರಲ್ಲಿ ಶೇ.35ರಷ್ಟು ಮಂದಿ 2ನೇ ಡೋಸ್ ಪಡೆಯಬೇಕಾಗಿದೆ. ಜಿಲ್ಲೆಯಲ್ಲಿ 2 ಲಕ್ಷ ಮಂದಿ ಸೆಕೆಂಡ್ ಡೋಸ್ ಪಡೆಯುವುದು ಬಾಕಿ ಇದೆ. ಮೈಸೂರು ನಗರದಲ್ಲಿಯೇ 1 ಲಕ್ಷ ಮಂದಿ ಸೆಕೆಂಡ್ ಡೋಸ್ ಲಸಿಕೆ ಪಡೆಯುವುದು ಬಾಕಿ ಇದೆ ಎಂದಿದ್ದಾರೆ.
ಮಹಾನಗರ ಪಾಲಿಕೆ ಸಿಬ್ಬಂದಿ ಮನೆ ಮನೆಗೆ ಲಸಿಕೆ ಹಾಕಲು ಹೋಗುತ್ತಿದ್ದಾರೆ. ಆದರೆ, ಜನರು ಸ್ಪಂದಿಸುತ್ತಿಲ್ಲ. ಇಂದಿನ ಅಂತಾರಾಷ್ಟ್ರೀಯ ಮಟ್ಟದ ಪರಿಸ್ಥಿತಿ ಬೇರೆ ಇದೆ. ಜನರು ಅರ್ಥಮಾಡಿಕೊಂಡು ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.