ಮೈಸೂರು:ಕೊಡಗಿನಲ್ಲಿ ಕೇವಲ 24 ಗಂಟೆಗಳಲ್ಲಿ ಹುಲಿಯೊಂದು ಅಜ್ಜ ಮತ್ತು ಮೊಮ್ಮಗನ್ನು ಬಲಿ ಪಡೆದಿತ್ತು. ಇಬ್ಬರ ಸಾವಿನ ಸುದ್ದಿಯಿಂದ ಅಘಾತಕ್ಕೊಳಗಾಗಿ ಇತ್ತ ಅಜ್ಜಿಯೂ ಸಾವನಪ್ಪಿರುವ ಘಟನೆ ಮೈಸೂರು ಸಮೀಪದ ಕಾಡಂಚಿನ ಗ್ರಾಮ ಕೊಳುವಿಗೆಯಲ್ಲಿ ಸೋಮವಾರ ನಡೆದಿದೆ. ಕೊಳವಿಗೆ ಹಾಡಿಯ ಜೇನು ಕುರುಬ ಮಹಿಳೆ ಜಯಮ್ಮ ಕೋಂ ತಮ್ಮಯ್ಯ( 54) ಮೃತಪಟ್ಟಿದ್ದಾರೆ.
ಹುಲಿ ದಾಳಿಯಿಂದ ಮೃತ ಪಟ್ಟಿರುವವರ ಬಗ್ಗೆ ಇಂದು ಮಧ್ಯಾಹ್ನ ವಿಧಾನಮಂಡಲ ಅಧಿವೇಶನದಲ್ಲಿ ಹುಣಸೂರಿನ ಶಾಸಕ ಎಚ್.ಪಿ ಮಂಜುನಾಥ್ ವಿಧಾನಸಭಾ ಅಧ್ಯಕ್ಷರಾದ ವಿಶ್ವೇಶ್ವರ ಕಾಗೇರಿಯವರಿಗೆ ಮಾಹಿತಿ ನೀಡಿ ವಿಷಯ ಪ್ರಸ್ತಾಪಿಸಿದ್ದು, ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದ ಬಗ್ಗೆ ಮಾತನಾಡಿದ್ದಾರೆ. ಅಲ್ಲದೇ ಸರ್ಕಾರ ಈ ಕೂಡಲೇ ಕ್ರಮ ಕೈಗೊಳ್ಳಲು ಆಗ್ರಹಿಸಿ, ನಿರ್ಲಕ್ಷ ವಹಿಸಿರುವ ಹಿರಿಯ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದ್ದಾರೆ.
ಅಜ್ಜ, ಮೊಮ್ಮಗನನ್ನು ಬಲಿ ಪಡೆದ ಹುಲಿ: ಕೊಡಗು ಜಿಲ್ಲೆಯಲ್ಲಿ ಕೇವಲ 24 ಗಂಟೆಯಲ್ಲಿ ಹುಲಿಯೊಂದು ಇಬ್ಬರನ್ನು ಬಲಿ ಪಡೆದಿದೆ. ಕೆ.ಬಾಡಗ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಚೂರಿಕಾಡು ನೆಲ್ಲರ ಪೂಣಚ್ಚ ಎಂಬವರ ಮನೆಯಲ್ಲಿ ಕೆಲಸ ಮಾಡಲೆಂದು 12 ವರ್ಷದ ಬಾಲಕ ಚೇತನ್ ಮತ್ತು ಪೋಷಕರು ತೆರಳಿದ್ದರು. ಭಾನುವಾರ ಸಂಜೆ ಆರೇಳು ಗಂಟೆಯ ಸುಮಾರಿಗೆ ಕಾಫಿ ತೋಟದ ಮನೆಯ ಮುಂಭಾದಲ್ಲೇ ಚೇತನ್ ಆಟವಾಡುತ್ತಿದ್ದನು. ಈ ವೇಳೆ ಹುಲಿ ಬಾಲಕನ ಮೇಲೆ ದಾಳಿ ಮಾಡಿದ್ದು, ಸ್ಥಳದಲ್ಲೇ ಸಾವ್ನನಪ್ಪಿದ್ದನು. ಹುಣಸೂರು ಸಮೀಪದ ಪಂಚವಳ್ಳಿ ಗ್ರಾಮದಿಂದ ಕೂಲಿ ಮಾಡಲು ಬಂದಿದ್ದ ಕಾರ್ಮಿಕ ಕುಟುಂಬದ ಕೂಸು ಚೇತನ್ ಆಗಿದ್ದ.