ಕರ್ನಾಟಕ

karnataka

ETV Bharat / state

ಪ್ರೊ ಭಗವಾನ್ ಮನೆಗೆ ಮುತ್ತಿಗೆ ಹಾಕಲು ಒಕ್ಕಲಿಗ ಸಂಘಟನೆ ಯತ್ನ.. ಪೊಲೀಸರಿಂದ ಬಿಗಿ ಭದ್ರತೆ

ಒಕ್ಕಲಿಗರ ವಿರುದ್ಧ ಪ್ರೊ. ಭಗವಾನ್​ ವಿವಾದಾತ್ಮಕ ಹೇಳಿಕೆ ನೀಡಿದ ಹಿನ್ನೆಲೆ ಮೈಸೂರಿನಲ್ಲಿ ಇಂದು ಒಕ್ಕಲಿಗರ ಸಂಘಟನೆ ಅವರ ಮನೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಭಗವಾನ್​ಮನೆಗೆ ಒಕ್ಕಲಿಗ ಸಂಘಟನೆ ಮುತ್ತಿಗೆ ಯತ್ನ
ಭಗವಾನ್​ಮನೆಗೆ ಒಕ್ಕಲಿಗ ಸಂಘಟನೆ ಮುತ್ತಿಗೆ ಯತ್ನ

By ETV Bharat Karnataka Team

Published : Oct 14, 2023, 8:30 PM IST

ಮೈಸೂರು: ನಿನ್ನೆ ದಿನ ಮಹಿಷಾ ಉತ್ಸವ ವೇದಿಕೆ ಕಾರ್ಯಕ್ರಮದಲ್ಲಿ ಒಕ್ಕಲಿಗ ಸಮುದಾಯದ ವಿರುದ್ಧ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ, ಇಂದು ಒಕ್ಕಲಿಗ ಸಮುದಾಯದವರು ಪ್ರೊ. ಭಗವಾನ್ ಮನೆಯ ಮುಂದೆ ಪ್ರತಿಭಟನೆ ನಡೆಸಿ, ಅವರ ಮನೆಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೋಲಿಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಶುಕ್ರವಾರ ಮಹಿಷಾ ಉತ್ಸವದಲ್ಲಿ ಒಕ್ಕಲಿಗ ಸಮುದಾಯವನ್ನು ಕೆರಳಿಸುವ ರೀತಿ ಕೆ ಎಸ್ ಭಗವಾನ್ ನೀಡಿದ್ದ ಹೇಳಿಕೆಯಿಂದ ಕುಪಿತಗೊಂಡಿರುವ ಒಕ್ಕಲಿಗ ಸಮುದಾಯದವರು ಅದನ್ನು ಖಂಡಿಸಿ ಶನಿವಾರ ಪ್ರತಿಭಟನೆ ನಡೆಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ.

ಭಗವಾನ್ ಮನೆ ಬಳಿ ಬಿಗಿ ಪೊಲೀಸ್ ಭದ್ರತೆ:ಘಟನೆ ಬಳಿಕಮೈಸೂರಿನ ಕುವೆಂಪುನಗರದಲ್ಲಿರುವ ಭಗವಾನ್ ನಿವಾಸಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮನೆಗೆ ಪೊಲೀಸ್ ಸರ್ಪಗಾವಲು ಹಾಕಿದ್ದು ಮುಂಭಾಗದಲ್ಲಿ ಬ್ಯಾರಿಕೇಡ್​ಗಳನ್ನು ಹಾಕಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಸ್ಥಳದಲ್ಲಿ ರಾಜ್ಯ ಮೀಸಲು ಪಡೆಯ ಪೊಲೀಸರ ನಿಯೋಜನೆ ಮಾಡಲಾಗಿದ್ದು, ನೂರಕ್ಕೂ ಹೆಚ್ಚು ಪೊಲೀಸರು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

ಪೊಲೀಸರು ಪ್ರತಿಭಟನಕಾರರ ನಡುವೆ ಚಕಮಕಿ: ಒಕ್ಕಲಿಗ ಸಮುದಾಯದ ವಿರುದ್ಧ ಆಕ್ಷೇಪಾರ್ಹ ಹೇಳಿಕೆಯನ್ನು ನೀಡಿರುವ ಭಗವಾನ್ ನಿವಾಸದ ಬಳಿ ಆಗಮಿಸಿದ ಒಕ್ಕಲಿಗ ಸಮುದಾಯದ ಜನರನ್ನು ಪೊಲೀಸರು ತಡೆದಿದ್ದಾರೆ. ಈ ವೇಳೆ ಮಾತಿನ ಚಕಮಕಿ ಏರ್ಪಟ್ಟಿದೆ. ಒಕ್ಕಲಿಗರನ್ನು ಗುರಿಯಾಗಿಸಿಕೊಂಡು ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆ. ಹಾಗಾಗಿ ಭಗವಾನ್ ಭೇಟಿಗೆ ಅವಕಾಶ ಮಾಡಿ ಕೊಡಿ. ಅವರ ಬಳಿ ಸಂಸ್ಕೃತಿಯ ಪಾಠ ಕೇಳುತ್ತೇವೆ ಎಂದು ಪಟ್ಟು ಹಿಡಿದಿದ್ದರು. ಸ್ಥಳದಲ್ಲಿ ಸ್ವಲ್ಪ ಕಾಲ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಅರಿತ ಪೊಲೀಸರು ಪ್ರತಿಭಟನಕಾರರನ್ನು ವಶಕ್ಕೆ ಪಡೆದರು.

ಗಡಿಪಾರು ಮಾಡುವಂತೆ ಒತ್ತಾಯಿಸಿ ರಸ್ತೆ ಮೇಲೆ ಪ್ರತಿಭಟನೆ: ಬಳಿಕ ರಸ್ತೆ ಮೇಲೆ ಪ್ರತಿಭಟನೆ ನಡೆಸಿ ಭಗವಾನ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಭಗವಾನ್ ಅವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು. ಬಳಿಕ ರಸ್ತೆ ಮಧ್ಯೆ ಕುಳಿತು ಪ್ರತಿಭಟನೆ ನಡೆಸಿದ್ದರಿಂದ ಆ ಮಾರ್ಗದ ವಾಹನ ಸಂಚಾರ ಬಂದ್ ಮಾಡಿದ ಪೊಲೀಸರು, ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ, ಮತ್ತೆ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಪರಿಸ್ಥಿತಿ ತಿಳಿಯಾದ ನಂತರ ಅವರನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಇದನ್ನೂ ಓದಿ:ಒಕ್ಕಲಿಗರ ಬಗ್ಗೆ ಪ್ರೊ ಭಗವಾನ್ ವಿವಾದಾತ್ಮಕ ಹೇಳಿಕೆ: ಬಂಧಿಸುವಂತೆ ಅಶ್ವತ್ಥನಾರಾಯಣ, ಆರಗ ಜ್ಞಾನೇಂದ್ರ ಒತ್ತಾಯ

ABOUT THE AUTHOR

...view details