ಮೈಸೂರು:ನಾನು ಈಗ ಮುಖ್ಯಮಂತ್ರಿ ಆಕಾಂಕ್ಷಿಯಲ್ಲ. ಈಗ ಪ್ರಬಲ ಮುಖ್ಯಮಂತ್ರಿಗಳಿದ್ದಾರೆ ಮುಂದಿನ ದಿನಗಳಲ್ಲಿ ನೋಡೋಣವೆಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಮೈಸೂರಿನ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಸ್ಥಾನಗಳ ಬಗ್ಗೆ ಆಲೋಚನೆ ಮಾಡಿಲ್ಲ. ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರಬಲರು ಇದ್ದಾರೆ. ಪಕ್ಷ ಯಾವ ಕೆಲಸ ಕೊಟ್ಟರೂ ಮಾಡುತ್ತೇನೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಈಗ ಚರ್ಚೆ ಮಾಡುವುದು ಬೇಡ. ಪಕ್ಷದಲ್ಲಿ ಕಾರ್ಯಕರ್ತನಾಗಿ ನನ್ನ ಕೆಲಸ ಮಾಡುತ್ತೀನಿ. ರಾಜ್ಯದ ವಿಧಾನಸಭಾ ಚುನಾವಣೆಗೆ ಪಕ್ಷ ಯಾವ ಜವಾಬ್ದಾರಿ ಕೊಟ್ಟರೂ ನಿರ್ವಹಿಸುತ್ತೇನೆ. ನಾನೊಬ್ಬನೇ ಟ್ರಬಲ್ ಶೂಟರ್ ಅಲ್ಲ. ಮೂರು ಪಕ್ಷಗಳಲ್ಲಿಯೂ ಅನುಭವಿ ರಾಜಕಾರಣಿಗಳಿದ್ದಾರೆ ಎಂದರು.
ನಾನು ಜೈಲಿನಲ್ಲಿದ್ದಾಗ ಗಣಪತಿ ಸಚ್ಚಿದಾನಂದ ಸ್ವಾಮೀಜಿಗಳು ನನ್ನ ಮನೆಗೆ ಪ್ರಸಾದ ಕಳುಹಿಸಿ ಕೊಟ್ಟಿದ್ದರು. ಸುತ್ತೂರು ಸ್ವಾಮೀಜಿಗಳು ನನ್ನ ಆರೋಗ್ಯ ಸರಿ ಇಲ್ಲದಿದ್ದಾಗ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಮಾನವೀಯ ದೃಷ್ಟಿಯಿಂದ ನನ್ನನ್ನು ನೋಡಿದ್ದಾರೆ. ವಿವಿಧ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕೂಡ ನನ್ನ ಯೋಗಕ್ಷೇಮ ಕೇಳಿದ್ದಾರೆ ಎಂದರು.
ಜೈಲಿನಿಂದ ಹೊರಬಂದಾಗ ವಿವಿಧ ದೇವಸ್ಥಾನದ ಹರಕೆ ತೀರಿಸುವುದಾಗಿ ನನ್ನ ಪತ್ನಿ ಹರಕೆ ಹೊತ್ತುಕೊಂಡಿದ್ದಳು. ಅದರಂತೆ ದೇವಸ್ಥಾನಗಳಿಗೆ ಹೋಗುತ್ತೀದ್ದಿನಿ. ದೇವರ-ನನ್ನ ನಡುವಿನ ಹರಕೆ ವಿಷಯವನ್ನು ಹೇಳಲು ಆಗುತ್ತಾ? ಎಂದು ಪ್ರಶ್ನಿಸಿದರು.