ಮೈಸೂರು: ಜಗದೀಶ್ ಶೆಟ್ಟರ್ ಅನ್ನು ಟಾರ್ಗೆಟ್ ಮಾಡಿ ಇಡೀ ಬಿಜೆಪಿಯೇ ಸೋತು ಮಣ್ಣುಮುಕ್ಕಿದೆ. ಈಗ ರಾಜ್ಯದಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಎಂಬ ಪರಿಸ್ಥಿತಿ ಇದೆ. ದೇಶದಲ್ಲಿ ಬಿಜೆಪಿಯನ್ನು ಮಣಿಸಲು ಎಲ್ಲರೂ ಒಟ್ಟಾಗಬೇಕಾದ ಪರಿಸ್ಥಿತಿ ಈಗ ಬಂದಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮೈಸೂರು ವಿಶ್ವವಿದ್ಯಾಲಯದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಹೇಳಿಕೆ ನೀಡಿದ್ದಾರೆ.
ಇಂದು ಮೈಸೂರು ವಿಶ್ವವಿದ್ಯಾಲಯದಲ್ಲಿ ರಾಜ್ಯ ಮಟ್ಟದ ವಿಚಾರ ಸಂಕಿರಣದಲ್ಲಿ 2023ರ 16ನೇ ವಿಧಾನಸಭಾ ಚುನಾವಣೆಯ ಪ್ರಭಾವ, ಪರಿಣಾಮ ಹಾಗೂ ಭವಿಷ್ಯದ ರಾಜಕೀಯ ಆಯಾಮಗಳು ಎಂಬ ಕುರಿತು ಮೈಸೂರು ವಿವಿ ಸಹಯೋಗದೊಂದಿಗೆ ಡಾ. ಬಿ ಆರ್. ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣಾ ಕೇಂದ್ರದ ವತಿಯಿಂದ ಆಯೋಜನೆ ಮಾಡಲಾಗಿದ್ದ ವಿಚಾರಣ ಸಂಕಿರಣದಲ್ಲಿ ಮಾತನಾಡಿದರು.
ಕರ್ನಾಟಕದಲ್ಲಿ ಹಿಂದೆ ಬಿಜೆಪಿ ಸರ್ಕಾರ ಇತ್ತು. ಈಗ ಕಾಂಗ್ರೆಸ್ ಸರ್ಕಾರ ಬಂದಿದೆ. ಈ ಚುನಾವಣೆ ಕಾಂಗ್ರೆಸ್ನ ಗ್ಯಾರಂಟಿ ಜೊತೆ ಚಿಂತಕರು, ಪ್ರಜ್ಞಾವಂತ ಮತದಾರರ ಕೊಡುಗೆ ಇದೆ. ಪ್ರತಿ 5 ವರ್ಷಕ್ಕೊಮ್ಮೆ ಬದಲಾವಣೆ ಆಗುತ್ತದೆ. ನಾನು 1994 ರಿಂದಲೂ ಚುನಾವಣೆಗೆ ಸ್ಪರ್ಧೆ ಮಾಡಿ ಗೆಲುವು ಸಾಧಿಸುತ್ತಾ ಬಂದಿದ್ದೆ. ಆದರೆ ಈ ಬಾರಿ ನಾನು ಸೋತಿದ್ದೇನೆ. ಇದಕ್ಕೆ ನೂರೆಂಟು ಕಾರಣಗಳಿವೆ. ಜಗದೀಶ್ ಶೆಟ್ಟರ್ ಅನ್ನು ಟಾರ್ಗೆಟ್ ಮಾಡಿ, ಇಡೀ ಬಿಜೆಪಿಯೇ ಸೋತು ಮಣ್ಣು ಮುಕ್ಕಿದೆ ಎಂದು ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.
ಒಂದು ರಾಜಕೀಯ ಪಕ್ಷದ ಬೆಳವಣಿಗೆಗೆ ಪ್ರಬಲ ನಾಯಕತ್ವ ಬೇಕು:ಒಂದು ರಾಜಕೀಯ ಪಕ್ಷದ ಬೆಳವಣಿಗೆಗೆ ಪ್ರಬಲ ನಾಯಕತ್ವ ಬೇಕು. ಕರ್ನಾಟಕದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಮೊದಲಿನಿಂದಲೂ ಇಲ್ಲಿ ಜನ ಬೆಂಬಲಿಸಿಕೊಂಡು ಬಂದಿದ್ದಾರೆ. ಗ್ಯಾರಂಟಿ ಯೋಜನೆಗಳು ಹೊಸದೇನಲ್ಲ. ಇದು ಚುನಾವಣೆ ಗಿಮಿಕ್ಸ್ ಅಲ್ಲ. ಇಂತಹ ಯೋಜನೆಗಳು ಮುಂದುವರಿದ ರಾಷ್ಟ್ರಗಳಲ್ಲಿಯೂ ಇವೆ. ನಿರುದ್ಯೋಗ ಭತ್ಯೆ, ಉಚಿತ ವಿದ್ಯುತ್ ಸೇರಿದಂತೆ ಹಲವು ಯೋಜನೆಗಳು ಬೇರೆ ರಾಜ್ಯದಲ್ಲೂ ಇವೆ. ಕೆಳಹಂತದಲ್ಲಿರುವ ಬಡವರಿಗೂ ಸೌಲಭ್ಯಗಳು ತಲುಪುವಂತೆ ಆಗಬೇಕು. ಎರಡು ಪಕ್ಷಗಳ ನಡುವಿನ ಪೈಪೋಟಿಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಬಹಳ ಸೂಕ್ಷ್ಮವಾಗಿ ಆಡಳಿತ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸಹ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಮಾತನ್ನು ಸಹ ತಮ್ಮ ಭಾಷಣದಲ್ಲಿ ಹೇಳಿದರು.
ರಾಜ್ಯದಲ್ಲಿ ಈಗ ಬಿಜೆಪಿ ವರ್ಸಸ್ ಬಿಜೆಪಿ ಪರಿಸ್ಥಿತಿ:ರಾಜ್ಯದಲ್ಲಿ ಬಿಜೆಪಿ ವರ್ಸಸ್ ಬಿಜೆಪಿ ಎಂಬ ಪರಿಸ್ಥಿತಿ ಇದೆ. ಇಲ್ಲಿ ಬಿಜೆಪಿಯವರೇ ಬಿಜೆಪಿಗೆ ಶತ್ರುಗಳಾಗಿದ್ದಾರೆ. ಜೊತೆಗೆ ಬಿಜೆಪಿ ಇಂದು ರಾಜ್ಯದಲ್ಲಿ ಕೆಲವರ ಹಿಡಿತದಲ್ಲಿ ಇದೆ. ಆದರೆ ರಾಷ್ಟ್ರ ಮಟ್ಟದಲ್ಲಿ ವಿಪಕ್ಷಗಳು ಒಟ್ಟಾಗಿ ಬಿಜೆಪಿಯನ್ನ ಎದುರಿಸಬೇಕಾಗಿದೆ ಎಂದು ವಿಚಾರ ಸಂಕೀರ್ಣದಲ್ಲಿ ಜಗದೀಶ್ ಶೆಟ್ಟರ್ ಹೇಳಿಕೆ ನೀಡಿದ್ದು. ಇಂದು ಚುನಾವಣೆಯಲ್ಲಿ ಹಣದ ಪ್ರಭಾವ ಹೆಚ್ಚಾಗಿದೆ. ಪ್ರಾಮಾಣಿಕರಿಗೆ ಗೆಲ್ಲುವ ಅವಕಾಶವೇ ಇಲ್ಲದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಚುನಾವಣೆಗಳು ಒಂದು ರೀತಿ ಬಂಡವಾಳ ಹಾಕಿ ಲಾಭ ತೆಗೆಯುವಂತಹ ಬ್ಯುಸಿನೆಸ್ ಆಗಿದೆ. ಇದು ಪ್ರಜಾಪ್ರಭುತ್ವಕ್ಕೆ ಆಪಾಯ ಉಂಟುಮಾಡಲಿದ್ದು, ಈ ವ್ಯವಸ್ಥೆ ನಿಲ್ಲಬೇಕು ಎಂದು ಜಗದೀಶ್ ಶೆಟ್ಟರ್ ಹೇಳಿದರು.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಇಷ್ಟವಿಲ್ಲ:ನಾನು ಯಾವುದನ್ನು ನಿರೀಕ್ಷೆ ಮಾಡಿಲ್ಲ. ಎಲ್ಲವನ್ನೂ ಪಕ್ಷಕ್ಕೆ ಬಿಟ್ಟಿದ್ದೇನೆ. ಪಕ್ಷ ಯಾವ ರೀತಿ ನನ್ನನ್ನು ಬಳಸಿಕೊಳ್ಳುತ್ತದೋ ನೋಡಬೇಕು. ಪಕ್ಷದ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ. ನಾನು ಮೊದಲಿನಿಂದಲೂ ರಾಜ್ಯ ರಾಜಕಾರಣದಲ್ಲಿ ಇದ್ದವನು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಇಂಗಿತ ಇಲ್ಲ ಎಂದು ಹೇಳುವ ಮೂಲಕ, ಪರೋಕ್ಷವಾಗಿ ವಿಧಾನ ಪರಿಷತ್ಗೆ ಆಯ್ಕೆಯಾಗುವ ಇಂಗಿತವನ್ನು ವಿಚಾರ ಸಂಕಿರಣದಲ್ಲಿ ಜಗದೀಶ್ ಶೆಟ್ಟರ್ ವ್ಯಕ್ತಪಡಿಸಿದರು.
ಇದನ್ನೂ ಓದಿ:ಅಭ್ಯರ್ಥಿಗಳ ಆಯ್ಕೆಯಲ್ಲಿ ಎಡವಟ್ಟು, ಕಾಂಗ್ರೆಸ್ ಸಿದ್ದತೆಯ ಕಡೆಗಣನೆ: ಸೋಲಿಗೆ ಕಾರಣ ಕಂಡುಕೊಂಡ ಬಿಜೆಪಿ