ಮೈಸೂರು:ಯಾವುದೇ ಅಪರಾಧಿಗಳನ್ನು ರಕ್ಷಿಸುವ ಕೆಲಸವಾಗುತ್ತಿಲ್ಲ. ಇದರ ಬಗ್ಗೆ ಮಾತನಾಡುವವರು ಪರಿಜ್ಞಾನ ಇಟ್ಟುಕೊಳ್ಳಬೇಕು. ಆರೋಪ ಮಾಡಬೇಕು ಎಂಬ ಕಾರಣಕ್ಕೆ ಮಾಡಬಾರದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು.
ಕೆಆರ್ ನಗರದಲ್ಲಿ ಪೊಲೀಸ್ ವಸತಿ ಗೃಹ-2020 ಫೇಸ್ 03 ಯೋಜನೆಯಡಿ ನೂತನವಾಗಿ ನಿರ್ಮಿಸಿರುವ 24 ಪೊಲೀಸ್ ವಸತಿ ಗೃಹಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವರು ಭಾಗವಹಿಸಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಚಾಮುಂಡಿ ಬೆಟ್ಟದ ಬಳಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರು ದೀರ್ಘ ಸಮಯವನ್ನು ತೆಗೆದುಕೊಂಡಿಲ್ಲ. ಚುರುಕು ಕಾರ್ಯಾಚರಣೆ ನಡೆಸಿ ಒಂದು ವಾರದೊಳಗಾಗಿ ಆರೋಪಿಗಳ ಸುಳಿವನ್ನು ಪತ್ತೆ ಹಚ್ಚಿ ತಮಿಳುನಾಡಿಗೆ ಹೋಗಿ ಬಂಧಿಸಿದ್ದಾರೆ. ಯಾವುದೇ ಅಪರಾಧಿಗಳನ್ನು ರಕ್ಷಿಸುವ ಕೆಲಸವಾಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ನಾಟಕದ ಪೊಲೀಸರು ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಜೊತೆಗೆ ಯಾವುದೇ ಸಂದರ್ಭ ಬಂದರೂ ಶೀಘ್ರವಾಗಿ ಅಪರಾಧಿಗಳ ಜಾಡು ಹಿಡಿದು ಹೆಡೆಮುರಿ ಕಟ್ಟುತ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.