ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ನಾಳೆ (ಗುರುವಾರ) ಅಧಿಸೂಚನೆ ಹೊರಡಿಸಲಾಗುವುದು. ನಾಳೆಯಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಸರ್ಕಾರಿ ರಜಾ ದಿನಗಳು ಹೊರತುಪಡಿಸಿ, ಉಳಿದ ದಿನಗಳಲ್ಲಿ ಸಲ್ಲಿಕೆಗೆ ಅವಕಾಶವಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3ಗಂಟೆಯ ವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಏಪ್ರಿಲ್ 20ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದ್ದು, ಏಪ್ರಿಲ್ 21 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ನಾಮಪತ್ರ ವಾಪಸ್ ತೆಗೆದುಕೊಳ್ಳಲು ಏಪ್ರಿಲ್ 24 ಕೊನೆಯ ದಿನ. ಮೇ 10 ರಂದು ಮತದಾನ ನಡೆಯಲಿದೆ. ಮೇ 13 ರಂದು ಮತ ಎಣಿಕೆ ನಡೆಯಲಿದೆ. ಮೇ 15 ರಂದು ಚುನಾವಣಾ ಪ್ರಕ್ರಿಯೆಗೆ ತೆರೆ ಬಿಳಲಿದೆ ಎಂದು ಮಾಹಿತಿ ನೀಡಿದರು.
2,905 ಮತಗಟ್ಟೆ ಸ್ಥಾಪನೆ: ಮೈಸೂರು ಜಿಲ್ಲೆಯಲ್ಲಿ 2905 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮಾದರಿ ನೀತಿ ಸಂಹಿತೆ ಹಾಗೂ ಅಭ್ಯರ್ಥಿಗಳ ವೆಚ್ಚದ ಮೇಲೆ ನಿಗಾ ಇಡಲು ತಂಡ ರಚನೆ ಮಾಡಲಾಗಿದೆ. ಇದುವರೆಗೆ ಮೈಸೂರು ಜಿಲ್ಲಾದ್ಯಂತ 1,39,26,353 ನಗದು ವಶಪಡಿಸಿಕೊಳ್ಳಲಾಗಿದೆ. ಇದರ ಜೊತೆಗೆ 3,63,40,561 ರೂಪಾಯಿ ಮೌಲ್ಯದ ಅಕ್ರಮ ಮದ್ಯ ಹಾಗೂ 6,14,250 ಮೌಲ್ಯದ ಮಾದಕ ಪದಾರ್ಥ ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿ ವಿವರಿಸಿದರು.