ಮೈಸೂರು:ಅಕ್ಟೋಬರ್ 13 ರಂದು ಮಹಿಷ ದಸರಾ ಮತ್ತು ಚಾಮುಂಡಿ ಬೆಟ್ಟ ಚಲೋ ಎಂಬ ಎರಡು ಕಾರ್ಯಕ್ರಮಗಳಿಗೆ ಅನುಮತಿಯನ್ನು ನಗರ ಪೊಲೀಸ್ ಆಯುಕ್ತರು ನಿರಾಕರಿಸಿದ್ದಾರೆ. ಮಹಿಷ ದಸರಾ ಆಚರಣಾ ಸಮಿತಿಯು ಅ.13 ರಂದು ಮಹಿಷ ದಸರಾ ಆಚರಣೆ ಹಿನ್ನೆಲೆಯಲ್ಲಿ ಬೆಳಗ್ಗೆ 9:30 ಗಂಟೆಗೆ ಮಹಿಷ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲು ಅನುಮತಿ ಕೋರಿತ್ತು.
ಪುಷ್ಪಾರ್ಚನೆಯ ನಂತರ ಬೆಟ್ಟದ ತಪ್ಪಲಿನ ಮುಖ್ಯದ್ವಾರ ತಾವರೆ ಕಟ್ಟೆ ಬಳಿಯಿಂದ ಮೃಗಾಲಯ ರಸ್ತೆ ಮೂಲಕ ಮೆರವಣಿಗೆಯಲ್ಲಿ ಸಂಚರಿಸಿ ಪುರಭವನದ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅದೇ ಆವರಣದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಂಬಂಧ ಪೊಲೀಸರು ಅನುಮತಿ ನೀಡುವಂತೆ ಮಹಿಷ ದಸರಾ ಸಮಿತಿ ಮನವಿ ಮಾಡಿತ್ತು.
ಪೊಲೀಸ್ ಆಯುಕ್ತರ ಪತ್ರಿಕಾ ಪ್ರಕಟಣೆ ಮತ್ತೊಂದೆಡೆ, ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಮಹಿಷ ದಸರಾ ಆಚರಣೆ ವಿರೋಧಿಸಿ ಅ.13 ರಂದು ಬೆಳಗ್ಗೆ 8ಕ್ಕೆ ಚಲೋ ಚಾಮುಂಡಿ ಬೆಟ್ಟ ಕಾರ್ಯಕ್ರಮ ಹಮ್ಮಿಕೊಳ್ಳಲು ಬೆಟ್ಟಕ್ಕೆ ಮೆಟ್ಟಿಲುಗಳ ಮುಖೇನ ಹತ್ತುವುದು ಹಾಗೂ ವಾಹನಗಳಲ್ಲಿ ರಸ್ತೆಯ ಮುಖಾಂತರ ಚಾಮುಂಡಿ ಬೆಟ್ಟಕ್ಕೆ ತೆರಳಿ ಚಲೋ-ಚಾಮುಂಡಿ ಬೆಟ್ಟ ಕಾರ್ಯಕ್ರಮ ನಡೆಸಲು ಪೊಲೀಸರು ಅನುಮತಿ ನೀಡುವಂತೆ ಮನವಿ ಮಾಡಿತ್ತು.
ಮೇಲ್ಕಂಡ ಎರಡು ಕಾರ್ಯಕ್ರಮಗಳನ್ನು ಮಾಡುವುದರಿಂದ ಮೈಸೂರು ನಗರದ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವ ಸಾಧ್ಯತೆಗಳು ಇರುವುದರಿಂದ ಪೊಲೀಸ್ ಇಲಾಖೆ ಎರಡೂ ಕಾರ್ಯಕ್ರಮಗಳಿಗೆ ಕಡಿವಾಣ ಹಾಕಿದೆ. ಮೈಸೂರು ನಗರದ ಪೊಲೀಸ್ ಆಯುಕ್ತ ಚಿ.ರಮೇಶ್ ಪತ್ರಿಕಾ ಪ್ರಕಟಣೆ ಮೂಲಕ ಈ ಮಾಹಿತಿ ನೀಡಿದ್ದಾರೆ.
ದಸರಾ ಸಿದ್ಧತೆ: ಈ ಬಾರಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ ತೂಕದ ಚಿನ್ನದ ಅಂಬಾರಿಯನ್ನು ಅಭಿಮನ್ಯು ಆನೆ ಹೊತ್ತು ಸಾಗಲಿರುವ ಕಾರಣ, ಆನೆಗೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಗುತ್ತಿದೆ. ನಿನ್ನೆ (ಸೋಮವಾರ) ಸಂಜೆಯಿಂದ ತಾಲೀಮು ಪ್ರಾರಂಭಿಸಲಾಗಿದೆ. ಅಭಿಮನ್ಯುವಿನ ಜೊತೆಗೆ ನಿಶಾನೆ ಆನೆಗಳೂ ತಾಲೀಮಿನಲ್ಲಿ ಭಾಗಿಯಾಗಿವೆ. ಅಭಿಮನ್ಯುವಿನ ಹಿಂಭಾಗದಲ್ಲಿ ಇತರ 11 ಆನೆಗಳು ಅರಮನೆಯ ಬಲರಾಮ ಗೇಟ್ ಮುಖಾಂತರ ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಆಯುರ್ವೇದಿಕ್ ವೃತ್ತದ ಮೂಲಕ ಬನ್ನಿ ಮಂಟಪದವರೆಗೆ ಸಾಗಿದವು.
ರತ್ನಖಚಿತ ಸಿಂಹಾಸನ ವೀಕ್ಷಿಸುವ ಅವಕಾಶ:ದಸರಾ ಹಿನ್ನೆಲೆಯಲ್ಲಿ ದರ್ಬಾರ್ ಹಾಲ್ ರತ್ನಖಚಿತ ಸಿಂಹಾಸನ ತಂದಿರಿಸಲಾಗಿದ್ದು, ವೀಕ್ಷಣೆಗೆ 50 ರೂ ಟಿಕೆಟ್ ನಿಗದಿಪಡಿಸಲಾಗಿದೆ. ನವರಾತ್ರಿಯಲ್ಲಿ ರಾಜ ಈ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ ನಂತರ ಸಂಪ್ರದಾಯದಂತೆ ದರ್ಬಾರ್ ನಡೆಸಲಿದ್ದಾರೆ. ದಸರಾ ಹಬ್ಬದ ವೀಕ್ಷಣೆ ಹಿನ್ನೆಲೆಯಲ್ಲಿ ಮೈಸೂರಿಗೆ ಆಗಮಿಸಿರುವ ವಿದೇಶಿ ಪ್ರವಾಸಿಗರು ರತ್ನ ಖಚಿತ ಸಿಂಹಾಸನವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:ದಸರಾ ಜಂಬೂ ಸವಾರಿ ತಾಲೀಮು: ಮಳೆ ನಡುವೆಯೂ ಮರದ ಅಂಬಾರಿ ಹೊತ್ತು ಸಾಗಿದ ಅಭಿಮನ್ಯು