ಮೈಸೂರು: ಯಡಿಯೂರಪ್ಪ ಅವರು ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ಅವರ ಜನಪ್ರಿಯತೆ ಈಗ ಮತ್ತಷ್ಟು ಹೆಚ್ಚಾಗಿದೆ. ಅವರ ಜನಪ್ರಿಯತೆ ಈಗಲೂ ಕುಗ್ಗಿಲ್ಲ. ಯಡಿಯೂರಪ್ಪ ಅವರು ಒಂದು ಶಕ್ತಿ, ಅವರನ್ನು ಮುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ಮೈಸೂರು ನಗರ ಬಿಜೆಪಿ ಮಾಧ್ಯಮ ಕಚೇರಿಯಲ್ಲಿ ಬಿ ವೈ ವಿಜಯೇಂದ್ರ ಮಾತನಾಡಿದರು.
ವರುಣಾದಲ್ಲಿ ಯಾವುದೇ ಒಳ ಒಪ್ಪಂದ ಇಲ್ಲ:ವರುಣಾ ವಿಧಾನಸಭಾ ಕ್ಷೇತ್ರದ ಮತದಾರರು ಅಭಿವೃದ್ಧಿ ಹಾಗೂ ಬದಲಾವಣೆ ಬಯಸಿದ್ದಾರೆ. ವರುಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ನಡುವೆ ಯಾವುದೇ ಒಳ ಒಪ್ಪಂದ ಆಗಿಲ್ಲ. ನನ್ನನ್ನು ರಾಜ್ಯದ ಜನರು ವರುಣಾ ಕ್ಷೇತ್ರದಿಂದಲೇ ಗುರುತಿಸಿದ್ದರು. ಹೀಗಾಗಿ ವರುಣಾ ಕ್ಷೇತ್ರದ ಬಗ್ಗೆ ನನಗೆ ಆಪಾರ ಗೌರವ ಇದೆ. ಯಡಿಯೂರಪ್ಪ ಅವರು ಪ್ರತಿನಿಧಿಸುತ್ತಿದ್ದ ಶಿಕಾರಿಪುರದಿಂದಲೇ ನಾನು ಸ್ಪರ್ಧಿಸಬೇಕಾದ್ದರಿಂದ ವರುಣಾದಿಂದ ಸ್ಪರ್ಧೆ ಮಾಡಲು ಸಾಧ್ಯವಾಗಿಲ್ಲ. ಇಲ್ಲಿ ಯಾವುದೇ ಒಳ ಒಪ್ಪಂದ ಆಗಿಲ್ಲ, ನಾನು ಮತ್ತೆ ವರುಣಾಗೆ ಆಗಮಿಸಿ ಸೋಮಣ್ಣ ಪರ ಪ್ರಚಾರ ನಡೆಸುತ್ತೇನೆ ಎಂದು ಬಿ ವೈ ವಿಜಯೇಂದ್ರ ಹೇಳಿದರು.
ಜಗದೀಶ್ ಶೆಟ್ಟರ್ ಸೋಲುತ್ತಾರೆ: ಜಗದೀಶ್ ಶೆಟ್ಟರ್ ಬಗ್ಗೆ ನಾನು ಟೀಕೆ ಮಾಡುವುದಿಲ್ಲ, ಅವರು ವೀರಶೈವ ಲಿಂಗಾಯತ ಧರ್ಮವನ್ನು ಒಡೆಯಲು ಮುಂದಾದ ಕಾಂಗ್ರೆಸ್ ಪಕ್ಷ ಸೇರಿದ್ದು ಬೇಸರ ತರಿಸಿದೆ. ಅವರು ಪಕ್ಷೇತರರಾಗಿ ಸ್ಪರ್ಧೆ ಮಾಡಬಹುದಿತ್ತು. ಆದರೆ, ಅವರು ಕಾಂಗ್ರೆಸ್ಗೆ ಹೋಗಿ ತಪ್ಪು ಮಾಡಿದ್ದಾರೆ. ಲಿಂಗಾಯತ ಮುಖಂಡರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಂಡಿಲ್ಲ. ಈ ನಡುವೆ ಶೆಟ್ಟರ್ ಕಾಂಗ್ರೆಸ್ ಸೇರಿದ್ದು ತಪ್ಪು, ಅವರು ಸ್ಪರ್ಧೆ ಮಾಡುವ ಕ್ಷೇತ್ರದಲ್ಲಿ ಜಗದೀಶ್ ಶೆಟ್ಟರ್ ಸೋಲುತ್ತಾರೆ. ಅಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ವಿಜಯೇಂದ್ರ ಹೇಳಿಕೆ ನೀಡಿದರು.