ಉಪ್ಪು ಮುಟ್ಟಿ ಪ್ರಮಾಣ ಮಾಡಿದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಮೈಸೂರು : ಚುನಾವಣಾ ಫಲಿತಾಂಶಕ್ಕೂ ಮುನ್ನವೇ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಳ ಒಪ್ಪಂದ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ ಅವರು, ತಾವು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ತಮ್ಮ ಮನೆಯಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮೂಲ ಕಾಂಗ್ರೆಸ್ಸಿಗರಾದ ಸಿದ್ದರಾಮಯ್ಯ ಅವರ ಆಪ್ತ ಮರೀಗೌಡ ನನ್ನ ವಿರುದ್ಧ ಕೆಲಸ ಮಾಡಿದ್ದಾರೆ. ನಾನು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಉಪ್ಪು ಮುಟ್ಟಿ ಪ್ರಮಾಣ ಮಾಡಿದರು. ನನ್ನ ವಿರುದ್ಧ ಮೂಲ ಕಾಂಗ್ರೆಸ್ಸಿಗರು ಅಪಪ್ರಚಾರ ಮಾಡಿದ್ದಾರೆ ಎಂದು ಭಾವುಕರಾದರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಫಲಿತಾಂಶಕ್ಕೂ ಮುನ್ನವೇ ವಾಕ್ಸಮರ ತಾರಕಕ್ಕೇರಿದೆ. ಮತದಾನದ ಮುನ್ನ ದಿನ ನನ್ನ ವಿರುದ್ಧ ಮರೀಗೌಡ ಹಾಗೂ ಇತರ ಮೂಲ ಕಾಂಗ್ರೆಸ್ಸಿಗರು ನಾನು ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೆ ಸುಮಾರು 500 ಜನರನ್ನು ಕ್ಷೇತ್ರದಲ್ಲಿ ಬಿಟ್ಟು ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾರೆ. ಇದನ್ನು ಜೆಡಿಎಸ್ ನವರು ಬಳಸಿಕೊಂಡರು. ಜೊತೆಗೆ ಚುನಾವಣೆ ಹಿಂದಿನ ದಿನ ನಾವು ಯಾರನ್ನು ನಂಬಿದ್ದೆವೋ ಅವರು ನಮಗೆ ಮೋಸ ಮಾಡಿದರು. ಆದ್ದರಿಂದ ನಮಗೆ ಸಂಪನ್ಮೂಲಕ್ಕೆ ಸ್ವಲ್ಪ ಕಷ್ಟ ಆಯಿತು. ಆದರೂ ಈಗಲೂ ಚಾಮುಂಡೇಶ್ವರಿಯಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದು ಹೇಳಿದ್ರು.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಟ್ಟು 11 ಜನ ಟಿಕೆಟ್ ಆಕಾಂಕ್ಷಿಗಳಿದ್ದರೂ, ಸಿದ್ದರಾಮಯ್ಯ ಅವರು ನನ್ನನ್ನು ನಂಬಿ ಟಿಕೆಟ್ ನೀಡಿದರು. ಇದರಿಂದ ನಾನು ಗೆಲ್ಲುತ್ತೇನೆ ಎಂದರು. ಮರೀಗೌಡ ಹಾಗೂ ಇತರರು ನನ್ನ ಬಗ್ಗೆ ಸಿದ್ದರಾಮಯ್ಯನವರಿಗೆ ಇಲ್ಲ ಸಲ್ಲದ ಛಾಡಿಯನ್ನು ಹೇಳಿದ್ದಾರೆ. ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿಲ್ಲ ಎಂದು ಹೇಳಿದರು.
ಇದನ್ನೂ ಓದಿ :ಸಮೀಕ್ಷೆಗಳು ಏನೇ ಹೇಳಿದರೂ ಬಿಜೆಪಿಗೆ 115 ಸ್ಥಾನ ಬರುತ್ತೆ: ಬಿಎಸ್ವೈ ವಿಶ್ವಾಸ