ಮೈಸೂರು: ಕೇಂದ್ರ ಮತ್ತು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ಸರ್ಕಾರವೇ ಅಧಿಕಾರದಲ್ಲಿದೆ. ಇನ್ನೂ 6 ತಿಂಗಳು ಉತ್ತಮ ಕೆಲಸ ಮಾಡಿ ನಂತರ ಚುನಾವಣೆಗೆ ಹೋಗಬಹುದು. ಆದ್ದರಿಂದ ಅವಧಿಗೆ ಮುನ್ನ ಚುನಾವಣೆ ಬರುವುದಿಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದೆ ಎಸ್.ಎಂ. ಕೃಷ್ಣ ಅಧಿಕಾರದ ಅವಧಿಯಲ್ಲಿ ಅವಧಿಗೂ ಮುನ್ನ ಚುನಾವಣೆ ನಡೆದಿತ್ತು. ಆ ಕಾರಣಕ್ಕಾಗಿ ಎಸ್.ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ಸೋಲಾಗಿತ್ತು. ಆದ್ದರಿಂದ ಈಗ ರಾಜ್ಯದಲ್ಲಿ ಅವಧಿಗೆ ಮುನ್ನ ಚುನಾವಣೆ ನಡೆಯುವುದಿಲ್ಲ ಎಂದರು. ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ದೂರದೃಷ್ಟಿಯಿಂದ ಮಾತನಾಡಿದ್ದಾರೆ. ವಯಸ್ಸಿನಲ್ಲಿ ಚಿಕ್ಕವರಾದರು ಪ್ರಬುದ್ಧತೆಯಿಂದ ಮಾತನಾಡಿದ್ದಾರೆ. ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಪಕ್ಷ ಸಂಘಟನೆಯ ದೃಷ್ಟಿಯಿಂದ ಇಲ್ಲಿಗೆ ಬಂದಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹೇಳಿದರು.