ಮೈಸೂರು:ಸತತ ಒಂದೂವರೆ ತಿಂಗಳಿನಿಂದ ಹಿರಿಯ ಆನೆಗಳೊಂದಿಗೆ ತಾಲೀಮು ನಡೆಸಿ, ಇದೀಗ ಜಂಬೂಸವಾರಿ ಮೆರವಣಿಗೆಯಲ್ಲಿ ಹೊಸ ಆನೆಗಳನ್ನು ಕೈಬಿಟ್ಟಿರುವುದಕ್ಕೆ ಮಾವುತರು, ಕಾವಾಡಿಗರು ಬೇಸರ ಹೊರಹಾಕಿದರು. ಮೆರವಣಿಗೆಯಲ್ಲಿ ನಾವೂ ಹೋಗುತ್ತೇವೆ ಎಂದು ಭಾವಿಸಿದ್ದ ಹೊಸ ಆನೆಗಳ ಮಾವುತರು ಹಾಗೂ ಕಾವಾಡಿಗರು, ಜನಸಂದಣಿಗೆ ಆನೆಗಳು ಬೆಚ್ಚುವ ಕಾರಣಕ್ಕೆ ಅರಣ್ಯಾಧಿಕಾರಿಗಳು ತೆಗೆದುಕೊಂಡ ನಿರ್ಧಾರಕ್ಕೆ ನಿರಾಶೆ ವ್ಯಕ್ತಪಡಿಸಿದ್ದಾರೆ.
ಗಜಪಡೆಯೊಂದಿಗೆ ಆಗಮಿಸಿರುವ ರೋಹಿತ್, ಕಂಜನ್, ಸುಗ್ರೀವ, ಹಿರಣ್ಯ, ಲಕ್ಷ್ಮಿ ಆನೆಗಳು ಇದೇ ಮೊದಲ ಬಾರಿಗೆ ಮಹೋತ್ಸವದಲ್ಲಿ ಪಾಲ್ಗೊಂಡು, ತಾಲೀಮಿನಲ್ಲಿ ಹಿರಿಯ ಆನೆಗಳೊಂದಿಗೆ ಗಂಭೀರವಾಗಿ ಹೆಜ್ಜೆ ಹಾಕಿವೆ. ಒಂದೂವರೆ ತಿಂಗಳು ನಡೆದ ತಾಲೀಮಿನಲ್ಲಿ ಹೊಸ ಆನೆಗಳಾದರೂ, ಜನಸಂದಣಿಗೆ ಬೆಚ್ಚದೆ ಪಾಲ್ಗೊಂಡು ಸೈ ಎನ್ನಿಸಿಕೊಂಡಿದ್ದವು. ಕುಶಾಲತೋಪು ತಾಲೀಮಿನಲ್ಲಿ ಹೊಸ ಆನೆಗಳು ಸ್ವಲ್ಪ ಬೆಚ್ಚಿದ್ದವು.
ಇಷ್ಟು ದಿನಗಳು ನಿರಂತರವಾಗಿ ತಾಲೀಮು ನಡೆಸಿ, ನಾವೂ ಜಂಬೂಸವಾರಿಯಲ್ಲಿ ಆನೆಗಳೊಂದಿಗೆ ಹೋಗುತ್ತೇವೆ ಎಂಬ ವಿಶ್ವಾಸವಿತ್ತು. ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಕೈಬಿಟ್ಟಿದ್ದಾರೆ. ಒಂದೆಡೆ ಬೇಸರವೂ, ಮತ್ತೊಂದೆಡೆ ಸಂತೋಷವೂ ಆಗಿದೆ ಎನ್ನುತ್ತಾರೆ ಹೆಸರು ಹೇಳದ ಮಾವುತರು ಹಾಗೂ ಕಾವಾಡಿಗಳು.