ಮೈಸೂರು:ಇಂದು ನಿಧನರಾಗಿರುವ 'ನಾಡೋಜ' ಸಾಹಿತಿ ಡಾ. ನಿಸಾರ್ ಅಹಮದ್ 2017ರಲ್ಲಿ ವಿಶ್ವ ವಿಖ್ಯಾತ ದಸರಾ ಮಹೋತ್ಸವವನ್ನು ಉದ್ಘಾಟಿಸಿ, ರಾಜಪರಂಪರೆ ಹಾಗೂ ಪ್ರಭುಪ್ರಭುತ್ವದಲ್ಲಿ ನಗರದ ಪಾತ್ರದ ಕುರಿತು ಗುಣಗಾನ ಮಾಡಿದ್ದರು.
ಅಂದು ದಸರಾ ಉದ್ಘಾಟಿಸಿ ರಾಜಪರಂಪರೆ, ಪ್ರಭುಪ್ರಭುತ್ವದ ಬಗ್ಗೆ ಮಾತನಾಡಿದ್ದರು ನಿಸಾರ್ - ದಸರಾ ಉದ್ಘಾಟಿಸಿದ್ದ ನಿಸಾರ್ ಅಹಮದ್
ಹಿರಿಯ ಕವಿ ಡಾ. ನಿಸಾರ್ ಅಹಮದ್ ಅನೇಕ ನೆನಪುಗಳನ್ನು ಬಿಟ್ಟು ಹೊರಟಿದ್ದಾರೆ. ಇದರಲ್ಲಿ ಅವರು ಮೈಸೂರು ದಸರಾ ಉದ್ಘಾಟಿಸಿ ಮಾತನಾಡಿದ್ದು ಎಂದಿಗೂ ಮನದಲ್ಲಿರುವಂತಿದೆ.
ಸಂಪ್ರದಾಯದಂತೆ ನಾಡ ಅಧಿದೇವತೆ ಚಾಮುಂಡೇಶ್ವರಿ ಬೆಟ್ಟದಲ್ಲಿ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದ ಕೆ.ಎಸ್.ನಿಸಾರ್ ಅಹಮದ್, ರಾಜರು ನೀಡಿದ ಕೊಡುಗೆ ಮತ್ತು ಅವರು ಹಾಕಿಕೊಟ್ಟ ಸಾಂಸ್ಕೃತಿಕ ಚಟುವಟಿಕೆಗಳ ವೈಭವವನ್ನು 400 ವರ್ಷಗಳಿಂದ ಮುಂದುವರಿಸಿಕೊಂಡು ಹೋಗುತ್ತಿರುವುದು ಸಂತಸವೆಂದು ಶ್ಲಾಘಿಸಿದ್ದರು.
ದಸರಾ ಆರಂಭದಿಂದ ಪಂಜಿನ ಕವಾಯತು ಮೈದಾನದಲ್ಲಿ ನಡೆದ ಪಂಜಿನ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅಲ್ಲದೇ ದಸರಾ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚಿಸಿದ್ದರು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅನೇಕ ಗಣ್ಯರು ದಸರಾ ಉದ್ಘಾಟನೆ ಸಂದರ್ಭದಲ್ಲಿ ಭಾಗಿಯಾಗಿದ್ದರು.