ಮೈಸೂರು:ದೇಶಾದ್ಯಂತ ಎನ್ಐಎ ಪಿಎಫ್ಐ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ಮಾಡಿದೆ. ದಕ್ಷಿಣ ಕನ್ನಡ ಮತ್ತು ಮಂಗಳೂರಿನಲ್ಲಿಯೂ ಎಸ್ಡಿಪಿಐ ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿ ರಾಜಕೀಯ ಪ್ರೇರಿತ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪ ಮಾಡಿದ್ದಾರೆ.
ಇಂದು ಈ ಕುರಿತು 'ಈಟಿವಿ ಭಾರತ'ದ ಜೊತೆ ಮಾತನಾಡಿದ ಅವರು, ಈ ದಾಳಿ ರಾಜಕೀಯ ಪ್ರೇರಿತವಾಗಿದೆ. ಇದರ ಹಿಂದೆ ಆರ್ಎಸ್ಎಸ್ ಕೈವಾಡವಿದೆ. ಜೊತೆಗೆ ಕೇಂದ್ರ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು, ಸರ್ಕಾರಿ ಎಜೆನ್ಸಿಗಳನ್ನು ದುರುಪಯೋಗ ಪಡಿಸಿಕೊಂಡು ಈ ರೀತಿ ದಾಳಿ ನಡೆಸುತ್ತಿದೆ. ಜೊತೆಗೆ ಸರ್ಕಾರದ ವಿರುದ್ಧ ಧ್ವನಿ ಎತ್ತಿದ ಪ್ರತಿಪಕ್ಷಗಳ ವಿರುದ್ಧವೂ ಸಹಾ ಈ ರೀತಿಯ ಸಂಚು ನಡೆದಿದೆ ಎಂದು ಅವರು ಆರೋಪಿಸಿದರು.
ಮಂಗಳೂರಿನ ಎಸ್ಡಿಪಿಐ ಕಚೇರಿಯ ಬಾಗಿಲನ್ನು ಮುರಿದಿದ್ದು ಸರಿಯಲ್ಲ. ಅದನ್ನು ಖಂಡಿಸುತ್ತೇವೆ. ಅದೊಂದು ಸಾರ್ವಜನಿಕರಿಗೆ ಮುಕ್ತಕಾದ ಕಚೇರಿ. ಇದು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಈ ರೀತಿ ಕಚೇರಿಯ ಮೇಲೆ ದಾಳಿ ಮಾಡುವ ಮುನ್ನ ಒಂದು ನೋಟಿಸ್ ಆದರೂ ನೀಡಬೇಕಿತ್ತು. ಆಗ ನಾವೇ ಮುಕ್ತವಾಗಿ ಶೋಧನೆ ಮಾಡಲು ಅವಕಾಶ ಮಾಡಿಕೊಡುತ್ತಿದ್ದೆವು. ಇದೊಂದು ಷಡ್ಯಂತ್ರದ ಭಾಗ ಎಂದು ಅಬ್ದುಲ್ ಮಜೀದ್ ಕಿಡಿಕಾರಿದರು.
ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಆರೋಪ ಇದನ್ನೂ ಓದಿ:ಬಂಧಿತರನ್ನು 24 ಗಂಟೆಯೊಳಗೆ ಬಿಡುಗಡೆ ಮಾಡಿ: ಹೋರಾಟದ ಎಚ್ಚರಿಕೆ ನೀಡಿದ ಎಸ್ಡಿಪಿಐ
ಎಸ್ಡಿಪಿಐ ಬ್ಯಾನ್ ಮಾಡುವ ಬಗ್ಗೆ ಯೋಚನೆ ನಡೆದಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅಬ್ದುಲ್ ಮಜೀದ್, ಇದನ್ನು ನಿಷೇಧಿಸುವ ಬದಲು ಆರ್ಎಸ್ಎಸ್ ಬ್ಯಾನ್ ಮಾಡಬೇಕು. ಬಾಬ್ರಿ ಮಸೀದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಮುಂತಾದ ಪ್ರಕರಣಗಳು ನಡೆದಿದ್ದು, ಇವರ ಕುಮ್ಮಕ್ಕಿನಿಂದಲೇ. ಮೊದಲು ಬಿಜೆಪಿ ಅವರು ಮಾಡುತ್ತಿರುವ ಆರೋಪಗಳು ಇಲ್ಲಿಯವರೆಗೆ ಎಸ್ಡಿಪಿಐ ಮೇಲೆ ಸಾಬೀತಾಗಿಲ್ಲ. ನಮ್ಮನ್ನು ದಾಳಿಯ ಮೂಲಕ ಟಾರ್ಗೆಟ್ ಮಾಡಿ ಎದುರಿಸುವ ಪ್ರಯತ್ನ ನಡೆಸಲಾಗುತ್ತಿದೆ. ನಾವು ಕಾನೂನು ಮೂಲಕವೇ ಉತ್ತರ ನೀಡುತ್ತೇವೆ ಎಂದು ಹೇಳಿದರು.