ಮೈಸೂರು:2020ರ ಹೊಸ ವರ್ಷಾಚರಣೆಯ ಸಂಬಂಧ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಾರ್ವಜನಿರಿಗೆ ಮತ್ತು ವಿವಿಧ ಸಂಘ ಸಂಸ್ಥೆಗಳಿಗೆ ನಗರ ಪೊಲೀಸ್ ಆಯುಕ್ತರ ಕಚೇರಿಯಿಂದ ಸೂಚನೆ ರವಾನಿಸಲಾಗಿದೆ.
ಡಿ.31ರ ರಾತ್ರಿ ಆರಂಭವಾಗುವ ಹೊಸ ವರ್ಷಾಚರಣೆಯನ್ನು ನಗರದ ಎಲ್ಲಾ ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂ ಸ್ಟೇ, ಸರ್ವಿಸ್ ಅಪಾರ್ಟ್‌ಮೆಂಟ್, ಅಪಾರ್ಟ್‌ಮೆಂಟ್ ಅಸೋಸಿಯೇಷನ್, ಮಾಲ್ಸ್ ಮತ್ತು ಸಂಘ ಸಂಸ್ಥೆಗಳು ಮತ್ತು ವಿಶೇಷ ಕೂಟಗಳನ್ನು ಮಧ್ಯರಾತ್ರಿ 1 ರೊಳಗೆ ಮುಗಿಸಬೇಕು. ಅದೂ ಕೂಡ ಒಳಾವರಣದಲ್ಲಿ ಮಾತ್ರ ಕಾರ್ಯಕ್ರಮಗಳನ್ನು ನಡೆಸಬೇಕು.
ಅಬಕಾರಿ ಇಲಾಖೆಯಿಂದ ಲಿಖಿತವಾಗಿ ಹೆಚ್ಚಿನ ಅವಧಿಗೆ ಅನುಮತಿಯನ್ನು ಕಡ್ಡಾಯವಾಗಿ ಪಡೆದು ಈ ಬಗ್ಗೆ ಪೊಲೀಸ್ ಆಯುಕ್ತರ ಕಚೇರಿಯಿಂದಲೂ ಸಹ ಅನುಮತಿ ಪಡೆಯುವುದು. ಹೊಸ ವರ್ಷಾಚರಣೆಗೆ ಅಬಕಾರಿ ಇಲಾಖೆಯಿಂದ ಒಂದು ದಿನದ ಮಟ್ಟಿಗೆ ಮದ್ಯಮಾರಾಟಕ್ಕೆ ಮತ್ತು ಸರಬರಾಜಿಗೆ ಅನುಮತಿ ಪಡೆದವರೂ ಸಹಾ ಪೊಲೀಸ್ ಆಯುಕ್ತರ ಕಚೇರಿಯಿಂದ ಅನುಮತಿ ಪಡೆಯಬೇಕು.ನಗರದಲ್ಲಿ ಈಗಾಗಲೇ 59 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದು, ಹೊಸದಾಗಿ 250 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿ ಪೊಲೀಸ್ ಕಂಟ್ರೋಲ್ ರೂಂ ಮೂಲಕ ಕಣ್ಗಾವಲು ಇಡಲಾಗುತ್ತದೆ. ಸಾರ್ವಜನಿಕರು ಅಂಗಡಿ, ಮನೆ ಇತ್ಯಾದಿ ಸ್ಥಳಗಳಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳು ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕಿದೆ.
ಅಬಕಾರಿ ಇಲಾಖೆಯಿಂದ ಅನುಮತಿ ಪಡೆದಿದ್ದರೂ ಸಹ ಎಲ್ಲಾ ಕಾರ್ಯಕ್ರಮಗಳನ್ನು ರಾತ್ರಿ 1ರೊಳಗೆ ಮುಕ್ತಾಯ ಮಾಡುವುದು. ವಿದ್ಯಾರ್ಥಿಗಳು ಹಾಗೂ ಯುವಕರು ಡಿ.31ರ ರಾತ್ರಿ ಹೊಸ ವರ್ಷಾಚರಣೆ ನೆಪದಲ್ಲಿ ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಅಸಭ್ಯವಾಗಿ ವರ್ತಿಸಬಾರದು. ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಆಶ್ಲೀಲ, ಅರೆಬೆತ್ತಲೆ ನೃತ್ಯ, ಮಾದಕ ವಸ್ತುಗಳ ಸೇವನೆ, ಜೂಜಾಟ ನಡೆಸುವುದನ್ನು ನಿಷೇಧಿಸಲಾಗಿದೆ. ಡಿ.31ರ ರಾತ್ರಿ ಹೊಸ ವರ್ಷ ಆಚರಣೆ ನೆಪದಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರನ್ನು ಬಲವಂತವಾಗಿ ನಿಲ್ಲಿಸಿ ಅವರ ಇಚ್ಛೆಗೆ ವಿರುದ್ಧವಾಗಿ ಶುಭ ಕೋರುವ ನೆಪದಲ್ಲಿ ಕಿರಿಕಿರಿ ಮಾಡಬಾರದು.
ಸಾರ್ವಜನಿಕರಿಗೆ ಶುಭ ಕೋರುವ ನೆಪದಲ್ಲಿ ಕೀಟಲೆ/ಅಸಭ್ಯವಾಗಿ ವರ್ತಿಸುವುದನ್ನು ತಡೆಯಲು ನಗರದಲ್ಲಿ 18 ವಿಶೇಷ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದೆ. ಹೊಸವರ್ಷಾಚರಣೆ ನೆಪದಲ್ಲಿ ವಾಹನಗಳನ್ನು ವ್ಹೀಲಿಂಗ್ ಮತ್ತು ಡ್ರಾಗ್ ರೇಸ್ ಮಾಡುವುದನ್ನು ಹಾಗೂ ಕರ್ಕಶ ಶಬ್ಧ ಉಂಟುಮಾಡುವುದನ್ನು ತಡೆಗಟ್ಟಲು ಸಂಚಾರ ಪೊಲೀಸರು ಮತ್ತು ತಜ್ಞರನ್ನು ಒಳಗೊಂಡ ಐದು ಕ್ಷಿಪ್ರ ಕಾರ್ಯಪಡೆಗಳನ್ನು ರಚಿಸಲಾಗಿದೆ.
ಚಾಮುಂಡಿ ಬೆಟ್ಟಕ್ಕೆ 31 ರಾತ್ರಿ 7ರ ನಂತರ ಉತ್ತನಹಳ್ಳಿ ಕ್ರಾಸ್ ಗೇಟ್, ದೈವಿವನ ಗೇಟ್, ಚಾಮುಂಡಿಬೆಟ್ಟ ಪಾದದ ಗೇಟ್, ಲಲಿತಮಹಲ್ ಗೇಟ್ ಮೂಲಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ.
ತಾವರೆಕಟ್ಟೆ ಗೇಟ್ ಮುಖಾಂತರ ರಾತ್ರಿ 9ರ ನಂತರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಯಾವುದೇ ರೀತಿಯ ಊಟ, ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ. ರಾತ್ರಿ 9ರ ಒಳಗೆ ಸಾರ್ವಜನಿಕರು ಚಾಮುಂಡಿಬೆಟ್ಟದಿಂದ ವಾಪಸ್ ಬರುವಂತೆ ಸೂಚಿಸಲಾಗಿದೆ. ಇದು ಚಾಮುಂಡಿ ಬೆಟ್ಟದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಹಾಗೂ ಚಾಮುಂಡಿ ಬೆಟ್ಟದಲ್ಲಿನ ವಾಸಿಸುವವರಿಗೆ ಅನ್ವಯಿಸುವುದಿಲ್ಲ. ಹಾಗೇ ಚಾಮುಂಡಿ ಬೆಟ್ಟದಿಂದ ರಾತ್ರಿ 9ರ ನಂತರ ವಾಪಸ್ಸು ಬರುವವರು ತಾವರೆಕಟ್ಟೆ ದ್ವಾರದ ಮುಖಾಂತರ ಬರುವಂತೆ ಸೂಚಿಸಲಾಗಿದೆ. ಕಾನೂನು ಉಲ್ಲಂಘಿಸಿದ್ರೆ ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತರ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.