ಮೈಸೂರು: ಮನೆ ಕಟ್ಟಬೇಕು ಎಂದರೆ ಮೊದಲು ಗಟ್ಟಿಯಾಗಿ ಅಡಿಪಾಯ ಹಾಕುವುದು ಸಾಮಾನ್ಯ. ಆದರೆ ಮೈಸೂರಿನ ಆರ್ಕಿಟೆಕ್ಟ್ ಒಬ್ಬರು ಅಡಿಪಾಯವಿಲ್ಲದೆ ಸುಭದ್ರವಾಗಿ ಕಡಿಮೆ ವೆಚ್ಚದಲ್ಲಿ, ಕಡಿಮೆ ಅವಧಿಯಲ್ಲಿ ಮನೆ ಕಟ್ಟಿ ತೋರಿಸಿದ್ದಾರೆ. ಈ ವಿನೂತನ ಅವಿಷ್ಕಾರವನ್ನು ಆರ್ಕಿಟೆಕ್ಟ್ ಶರತ್ ಕುಮಾರ್ ಈಟಿವಿ ಭಾರತ್‌ಗೆ ವಿವರಿಸಿದರು.
ಸಾಮಾನ್ಯವಾಗಿ ಮನೆ ನಿರ್ಮಾಣಕ್ಕೆ ಅಂದಾಜು 5ರಿಂದ 6 ಅಡಿ ಆಳ ಅಗೆದು ಅಡಿಪಾಯ ಹಾಕುತ್ತಾರೆ. ಆದರೆ ನಾವು ಹೊಸ ರೀತಿಯಲ್ಲಿ ಅಡಿಪಾಯವಿಲ್ಲದೆ ಮನೆ ಕಟ್ಟಲು ಮೂರು ವಿಧಾನಗಳನ್ನು ಬಳಸುತ್ತೇವೆ. ಮೊದಲನೆಯದು ಫೈಲ್ ಫೌಂಡೇಶನ್, ಇಲ್ಲಿ ಟ್ರಾಕ್ಟರ್ ಮೂಲಕ 7 ಅಡಿ ಭೂಮಿ ಕೊರೆದು ಪಿಲ್ಲರ್ ಅಳವಡಿಸುತ್ತೇವೆ. ಎರಡನೆಯದ್ದು ಫ್ಲೀಟ್ ಭೀಮ್ ಮತ್ತು ಮೂರನೇಯದ್ದು ಸ್ಲ್ಯಾಬ್ ಆನ್ ಗ್ರೇಡ್ ಎಂಬ ವಿಧಾನಗಳನ್ನು ಬಳಸಿ ಮನೆ ಕಟ್ಟುತ್ತೇವೆ.
ಈ ರೀತಿಯಲ್ಲಿ ಮನೆ ನಿರ್ಮಾಣ ಮಾಡುವುದರಿಂದ ಭೂಮಿಯನ್ನು ಅಗೆಯುವ ಅವಶ್ಯಕತೆ ಇಲ್ಲ. ಇದ್ರ ಜೊತೆಗೆ ಸಹಜವಾಗಿ ಮನೆ ನಿರ್ಮಾಣ ಮಾಡಲು ಬೇಕಾಗುವಷ್ಟು ಕೆಲಸಗಾರರೂ ಬೇಕಾಗುವುದಿಲ್ಲ. ಇದರಿಂದ ಮನೆ ಕಟ್ಟುವವರಿಗೆ ಶೇ 30 ರಿಂದ 40ರಷ್ಟು ಕಡಿಮೆ ಖರ್ಚಾಗುತ್ತದೆ. ಉಳಿದ ದುಡ್ಡನ್ನು ಮನೆಯ ಬೇರೆ ಕೆಲಸಕ್ಕೆ ಬಳಸಬಹುದು. ಸಾಮಾನ್ಯ ಮನೆ ಕಟ್ಟುವ ದುಡ್ಡಿನಲ್ಲಿ ಶೇ 30 ರಿಂದ 40ರಷ್ಟು ದುಡ್ಡು ಅಡಿಪಾಯಕ್ಕೆ ಬೇಕಾಗುತ್ತದೆ. ಆದರೆ ಅಡಿಪಾಯವಿಲ್ಲದೆ ಹೊಸ ತಂತ್ರಜ್ಞಾನದಿಂದ ಕಡಿಮೆ ಬಜೆಟ್‌ನಲ್ಲಿ ಮನೆ ನಿರ್ಮಾಣ ಮಾಡಬಹುದು.