ಮೈಸೂರು:ನಗರದಲ್ಲಿಸೈಬರ್ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅವುಗಳ ಪತ್ತೆಗಾಗಿ ವಿಶೇಷ ಸೈಬರ್ ಠಾಣೆಯನ್ನು ತೆರೆಯಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಪ್ರಕಾಶ್ ಗೌಡ ತಿಳಿಸಿದರು.
ಸೈಬರ್ ಕ್ರೈಮ್ ತಡೆಗೆ ಮೈಸೂರಿನಲ್ಲಿ ವಿಶೇಷ ಸೈಬರ್ ಠಾಣೆ
ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲೆಂದೇ ಜಿಲ್ಲಾ ಮಟ್ಟದಲ್ಲಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯನ್ನು ತೆರೆದಿದ್ದೇವೆ. ಆನ್ಲೈನ್ ಚಟುವಟಿಕೆಗಳನ್ನು ನಡೆಸುವಾಗ ಸಾರ್ವಜನಿಕರೂ ಜಾಗರೂಕರಾಗಿರಬೇಕು ಎಂದು ಡಿಸಿಪಿ ಪ್ರಕಾಶ್ ಗೌಡ ವಿವರಿಸಿದರು.
ನಗರದಲ್ಲಿ ದಾಖಲಾಗುವ ಸೈಬರ್ ಅಪರಾಧ ಪ್ರಕರಣಗಳ ಶೀಘ್ರ ಪತ್ತೆಗೆ ಈ ಠಾಣೆ ಸ್ಥಾಪಿಸಲಾಗಿದೆ. ಅದಕ್ಕಾಗಿಯೇ ಸಿಬ್ಬಂದಿಗೆ ವಿಶೇಷ ತರಬೇತಿ ಸಹ ನೀಡಲಾಗಿದೆ. ಇಂಟರ್ನೆಟ್ ಬಳಕೆದಾರರ ಸಂಖ್ಯೆ ಹೆಚ್ಚಾದಂತೆ ಸೈಬರ್ ಕ್ರೈಮ್ಗಳೂ ದುಪ್ಪಟ್ಟಾಗುತ್ತಿವೆ. ಅದರಲ್ಲಿ ಪ್ರಮುಖವಾದದ್ದು ಬ್ಯಾಂಕ್ ಮೂಲಕ ನಡೆಸುವ ವ್ಯವಹಾರ ಎಂದರು.
ಜನರನ್ನು ನಂಬಿಸಿ ಅವರಿಂದ ಆನ್ಲೈನ್ ಮೂಲಕ ಹಣ ವರ್ಗಾಯಿಸಿಕೊಳ್ಳುತ್ತಾರೆ. ಬ್ಯಾಂಕ್ ಸಿಬ್ಬಂದಿಯಂತೆ ಕರೆ ಮಾಡಿ ಸಾರ್ವಜನಿಕರಿಂದ ಒಟಿಪಿ ಪಡೆದು ಲಕ್ಷಾಂತರ ರೂಪಾಯಿ ವಂಚಿಸುತ್ತಿದ್ದಾರೆ. ಅಂತಹವುಗಳ ಕಡೆ ಗಮನ ಹರಿಸುವಂತೆ ಬ್ಯಾಂಕ್ಗಳಿಗೆ ಎಚ್ಚರಿಕೆ ನೀಡುತ್ತಿದ್ದೇವೆ. ಸಾರ್ವಜನಿಕರು ಸಹ ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದರು.