ಮೈಸೂರು:ಅರಮನೆಯಲ್ಲಿ ರಾಜ ವಂಶಸ್ಥರಿಂದ ಸರಳ ಹಾಗೂ ಸಾಂಪ್ರದಾಯಿಕವಾಗಿ ಶರನ್ನವರಾತ್ರಿ ಆಚರಣೆ ಮಾಡಲಾಯಿತು. ಇಂದು ಬೆಳಗ್ಗೆ ಶುಭ ಲಗ್ನದಲ್ಲಿ ನಾಡ ಅಧಿದೇವತೆ ಚಾಮುಂಡಿ ತಾಯಿಗೆ ಪುಷ್ಪಾರ್ಚನೆ ಮಾಡುವ ಮೂಲಕ ನಾಡಹಬ್ಬಕ್ಕೆ ಚಾಲನೆ ದೊರೆಯಿತು. ನಂತರ ಅರಮನೆಯಲ್ಲಿ ರಾಜವಂಶಸ್ಥರಿಂದ ಶರನ್ನವರಾತ್ರಿ ಧಾರ್ಮಿಕ ಕೈಂಕರ್ಯಗಳು ಆರಂಭವಾದವು.
ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ಜರುಗಿದ ನವರಾತ್ರಿ ಸಂಭ್ರಮ ಬೆಳಗ್ಗೆ ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆಗಳನ್ನು ಅರಮನೆ ಮುಂಭಾಗದ ಕೋಡಿ ಸೋಮೇಶ್ವರ ದೇವಾಲಯದ ಬಳಿ ಪೂಜೆ ಸಲ್ಲಿಸಿ ಅರಮನೆಗೆ ಕರೆದುಕೊಂಡು ಬರಲಾಯಿತು. ಅನಂತರ ಕಲ್ಯಾಣ ತೊಟ್ಟಿಯಲ್ಲಿ ಪೂಜೆ ಸಲ್ಲಿಸಿ ಅರಮನೆಯೊಳಗಿನ ಶರನ್ನವರಾತ್ರಿಯ ಧಾರ್ಮಿಕ ಪೂಜಾ ಕೈಂಕರ್ಯಗಳು ಆರಂಭವಾದವು.
ನಂತರ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಕಂಕಣಧಾರಣೆಯಾದ ನಂತರ ದರ್ಬಾರ್ ಹಾಲ್ ನಲ್ಲಿರುವ ಸಿಂಹಾಸನಕ್ಕೆ ಸಿಂಹ ಜೋಡಣೆ ಮಾಡಿ ರಾಜ ಪರಂಪರೆಯಂತೆ ದರ್ಬಾರ್ ನಡೆಸಿದರು. ಪುನಃ ಅರಮನೆಯೊಳಗೆ ಇತರ ಧಾರ್ಮಿಕ ಪೂಜೆಗಳ ಜೊತೆಗೆ ಅರಮನೆಯ ಪಟ್ಟದ ಆನೆಗೆ ಪೂಜೆ ಸಲ್ಲಿಸಲಾಯಿತು.
ಇಂದು ದರ್ಬಾರ್ ಹಾಲ್ನಲ್ಲಿರುವ ಚಿನ್ನದ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಖಾಸಗಿ ದರ್ಬಾರ್ ನಡೆಸಿದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಂಜೆ ಸಹ ಖಾಸಗಿ ದರ್ಬಾರ್ ನೆರವೇರಿಸಲಿದ್ದಾರೆ. ಮೊದಲ ದಿನ ಎರಡು ಬಾರಿ ಖಾಸಗಿ ದರ್ಬಾರ್ ನಡೆಸಿ ನಂತರ ನಾಳೆಯಿಂದ ನಿತ್ಯ ಖಾಸಗಿ ದರ್ಬಾರ್ ನಡೆಸಲಿದ್ದಾರೆ.
ಓದಿ:ಅರಮನೆಯಲ್ಲಿ ಶರನ್ನವರಾತ್ರಿ ಸಂಭ್ರಮ: ರಾಜ ವಂಶಸ್ಥರಿಂದ ಖಾಸಗಿ ದರ್ಬಾರ್