ಮೈಸೂರು: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳು ಭಾರತದ ಅಸ್ಮಿತೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಮೈಸೂರಿನ ಲಲಿತ ಮಹಲ್ ಹೊಟೇಲ್ದಲ್ಲಿ ಎರಡು ದಿನಗಳ ಕಾಲ ಆಯೋಜಿಸಿರುವ ರಾಷ್ಟ್ರೀಯ ಪರಿಶಿಷ್ಟ ಜಾತಿ ಕಾರ್ಯಕಾರಣಿ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಎಸ್ಸಿ, ಎಸ್ಟಿ ಸಮುದಾಯ ಒಟ್ಟಿಗೆ ಇದ್ದರೆ ಬಲ ಜಾಸ್ತಿಯಾಗಲಿದೆ. ಎಸ್ಸಿ ಎಸ್ಟಿ ಸಮುದಾಯಗಳು ಭಾರತೀಯ ಸಮಾಜದ ಪ್ರಮುಖ ಅಂಗಗಳಾಗಿವೆ. ಎರಡು ಸಮುದಾಯಗಳು ಭಾರತದ ಅಸ್ಮಿತೆಯಾಗಿವೆ. ಹಾಗಾಗಿ ಎರಡೂ ಸಮುದಾಯಗಳಿಗೂ ಶಕ್ತಿ ತುಂಬುವ ಅಗತ್ಯವಿದೆ ಎಂದು ತಿಳಿಸಿದರು.
ದೇಶದ ಆರ್ಥಿಕ ವ್ಯವಸ್ಥೆ ದುಡಿಯುವ ಕೆಳವರ್ಗದ ಕೈಯಲ್ಲಿದೆ. ದುಡಿಯುವ ವರ್ಗ ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದ್ದಾರೆ. ತಳ ಸಮುದಾಯಗಳು ಸ್ವಾಭಿಮಾನಿ, ಸ್ವಾವಲಂಬಿಯಾಗುವ ಅಗತ್ಯವಿದೆ. ನಾವು ಯಾರಿಗೂ ಕಡಿಮೆಯಿಲ್ಲ, ನಮಗೆ ಯಾರದೇ ಅನುಕಂಪದ ಅಗತ್ಯ ಇಲ್ಲ ಎಂಬ ಮನೋಭಾವನೆಯಿಂದ ಮುನ್ನಡೆಯಬೇಕು ಎಂದು ಸಲಹೆ ನೀಡಿದರು.
ಶೋಷಿತರ ಧ್ವನಿ ಅಂಬೇಡ್ಕರ್:ಅಂಬೇಡ್ಕರ್ ಪರಮ ಶ್ರೇಷ್ಠ ವ್ಯಕ್ತಿ. ಶೋಷಿತರ ಧ್ವನಿಯಾಗಿ ಕೆಲಸ ಮಾಡಿದ್ದರು. ನಾನೂ ಸಹ ಅಂಬೇಡ್ಕರ್ ವಾದಿ ಎಂದು ಗರ್ವದಿಂದ ಹೇಳುತ್ತೇನೆ. ಅಂಬೇಡ್ಕರ್ ನಂಬರ್ ಒನ್ ದೇಶ ಭಕ್ತರಾಗಿದ್ದರು. ಅಂಬೇಡ್ಕರ್ ಸಂಸತ್ಗೆ ಬರಲು ಅವಕಾಶ ನೀಡದ ಕಾಂಗ್ರೆಸ್ ಪಕ್ಷ ಇದೀಗ ಅಂಬೇಡ್ಕರ್ ಮುಂದಿಟ್ಟುಕೊಂಡು ರಾಜಕೀಯ ಲಾಭಕ್ಕಾಗಿ ಯತ್ನಿಸುತ್ತಿದೆ. ಅಂಬೇಡ್ಕರ್ ಅಂತ್ಯಕ್ರಿಯೆಗೆ ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಜಾಗ ಕೊಡಲಿಲ್ಲ. ಆದರೆ, ದಲಿತರ ಮತ ಪಡೆಯಲು ಕಾಂಗ್ರೆಸ್ ಅಂಬೇಡ್ಕರ್ ಹೆಸರು ಬಳಕೆ ಮಾಡಿಕೊಳ್ಳುತ್ತಿದೆ ಎಂದು ಆರೋಪಿಸಿದರು.
ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳ:ತುಳಿತಕ್ಕೊಳಗಾದರಿಗೆ, ಅವಕಾಶ ವಂಚಿತರಿಗೆ ನ್ಯಾಯ ಕೊಡಬೇಕು ಎನ್ನುವ ಕಾರಣಕ್ಕೆ ಕಳಕಳಿಯಿಂದ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಿಸಿದ್ದು, ಹತ್ತು ಹಲವು ಸಮುದಾಯದಲ್ಲಿ ಅವಕಾಶ ವಂಚಿತರಿದ್ದಾರೆ. ಅವರಿಗೂ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಮತ್ತಷ್ಟು ಸಮಯದಾಯದ ಮೀಸಲಾತಿ ಹೆಚ್ಚಳದ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.