ಮೈಸೂರು: ರಾಜ್ಯ ಪೊಲೀಸರ ಪ್ರಕರಣ ತನಿಖಾ ವಿಧಾನ, ಎಫ್ಐಆರ್ ದಾಖಲು ವ್ಯವಸ್ಥೆ, 112 ಹೆಲ್ಪ್ ಲೈನ್ ವ್ಯವಸ್ಥೆ ಎಲ್ಲಾ ಉತ್ತಮವಾಗಿದ್ದು, ಈ ಬಗ್ಗೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಂದು ಮೈಸೂರಿನ ಅಲನಹಳ್ಳಿ ಪೊಲೀಸ್ ಠಾಣೆ ಉದ್ಘಾಟಿಸಿ ಮಾತನಾಡಿದರು. "ಸ್ವಾತಂತ್ರ್ಯ ನಂತರ ಮೊದಲ ಬಾರಿ ಬಿಜೆಪಿ ಸರ್ಕಾರ ಪೊಲೀಸ್ ಇಲಾಖೆಗೆ ಬೇಕಾದ ಮೂಲಸೌಕರ್ಯ ಒದಗಿಸಿದೆ. ಪೊಲೀಸರ ವಸತಿಗೆ 200 ಕೋಟಿ ವೆಚ್ಚದಲ್ಲಿ 215 ಪೊಲೀಸ್ ಠಾಣೆಗಳನ್ನು ನಿರ್ಮಿಸಿಕೊಟ್ಟಿದೆ. ಹಿಂದೆಯಿದ್ದ ಸರ್ಕಾರದಲ್ಲಿ ಪೊಲೀಸ್ ನೇಮಕಾತಿ ಹುದ್ದೆ ಶೇ 37ರಷ್ಟಿತ್ತು. ಆದರೆ, ನಮ್ಮ ಸರ್ಕಾರ 5 ಸಾವಿರ ಕಾನ್ಸ್ಟೇಬಲ್ ಹುದ್ದೆಯನ್ನು ಭರ್ತಿ ಮಾಡಿದೆ. ಇನ್ನು ಕೇವಲ 12 ಸಾವಿರ ಹುದ್ದೆಗಳು ಬಾಕಿ ಇದ್ದು, ಅದನ್ನು ಆದಷ್ಟು ಶೀಘ್ರವೇ ಭರ್ತಿ ಮಾಡಲಾಗುವುದು ಎಂದರು.
ಅಲ್ಲದೇ, ಸೈಬರ್ ವಿಭಾಗವನ್ನು ಮತ್ತಷ್ಟು ಬಲಪಡಿಸಲಾಗಿದೆ. ಮೈಸೂರು ಪ್ರವಾಸಿತಾಣವಾಗಿದ್ದು, ಇಲ್ಲಿ ಕಾನೂನು ವ್ಯವಸ್ಥೆಗೆ ಹೆಚ್ಚು ಗಮನವಹಿಸಲಾಗಿದೆ. ರಾಜ್ಯ ಪೊಲೀಸ್ ವ್ಯವಸ್ಥೆಯ ಬಗ್ಗೆ ಹರಿಯಾಣದಲ್ಲಿ ನಡೆದ ಕಾನ್ಫರೆನ್ಸ್ನಲ್ಲಿ ಕರ್ನಾಟಕ ಪೊಲೀಸ್ ಬಗ್ಗೆ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಹೇಳಿದರು.