ಮೈಸೂರು:ಕಪಿಲೆಯ ಪ್ರವಾಹ ಇಳಿಮುಖವಾದ ಹಿನ್ನಲೆಯಲ್ಲಿ ದಕ್ಷಿಣ ಕಾಶಿ ನಂಜನಗೂಡು ಜಲ ದಿಗ್ಭಂಧನದಿಂದ ಮುಕ್ತಿ ಪಡೆದು ಸಹಜ ಸ್ಥಿತಿಗೆ ಬರುತ್ತಿದ್ದು ಇಂದು ಸಿಎಂ ಈ ಸ್ಥಳಗಳ ವೀಕ್ಷಣೆ ನಡೆಸಲಿದ್ದಾರೆ.
ನಂಜನಗೂಡಿನಲ್ಲಿ ತಗ್ಗಿದ ಪ್ರವಾಹ.. ಕಳೆದ ಮೂರು ದಿನಗಳಿಂದ ಕಪಿಲಾ ಪ್ರವಾಹದಲ್ಲಿ ಜಲ ದಿಗ್ಭಂಧನಕ್ಕೆ ಒಳಗಾಗಿದ್ದ ದಕ್ಷಿಣ ಕಾಶಿ ನಂಜನಗೂಡು ಹಾಗೂ ಹೆಚ್‌ಡಿಕೋಟೆಯ ಸರಗೂರು ಭಾಗದ ಗ್ರಾಮಗಳಲ್ಲಿ ಈಗ ಪ್ರವಾಹ ಕಡಿಮೆಯಾಗಿದ್ದು, ಜನ ಜೀವನ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಇದರಿಂದ ಚಾಮರಾಜನಗರ, ಗುಂಡ್ಲುಪೇಟೆ ಬಸ್‌ಗಳ ಸಂಚಾರ ಪುನಾರಂಭವಾಗಿವೆ. ನದಿ ಭಾಗದಲ್ಲಿ ಗ್ರಾಮಗಳಿಗೆ ಸಂಪರ್ಕ ಕಡಿತಗೊಂಡಿದ್ದ ಗ್ರಾಮಗಳಲ್ಲಿ ಪ್ರವಾಹ ಇಳಿಮುಖವಾಗಿದ್ದು, ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ.
ಕಡಿಮೆಯಾದ ಕಬಿನಿ ಪ್ರವಾಹ :
ಕೇರಳದ ವೈನಾಡು ಹಾಗೂ ನಾಗರಹೊಳೆಯ ವ್ಯಾಪ್ತಿಯಲ್ಲಿ ನಿನ್ನೆಯಿಂದ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ನಗು ಹಾಗೂ ತಾರಕ ಜಲಾಶಯದಿಂದ ಹೊರ ಹರಿವನ್ನು ಕಡಿಮೆ ಮಾಡಿದ್ದು, ಇದರ ಜೊತೆಗೆ ಕಬಿನಿ ಜಲಾಶಯದಿಂದ ನಿನ್ನೆ 1 ಲಕ್ಷ 20 ಸಾವಿರ ಹೊರ ಹರಿವನ್ನು ಬಿಡಲಾಗಿತ್ತು. ಆದರೆ, ಇಂದು ನದಿ ಪಾತ್ರಕ್ಕೆ ಕೇವಲ 20 ಸಾವಿರ ಕ್ಯೂಸೆಕ್ ಮಾತ್ರ ಹೊರಹರಿವನ್ನು ಬಿಡಲಾಗಿದೆ. ನದಿ ಪಾತ್ರದಲ್ಲಿ ಪ್ರವಾಹ ಸಂಪೂರ್ಣ ತಗ್ಗಿದ್ದು ಜನ ಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಈ ಮಧ್ಯೆ ಪ್ರವಾಹದಿಂದ ಮನೆ ಕಳೆದುಕೊಂಡು ತಾತ್ಕಾಲಿಕ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದ ಜನರು ಈಗ ಪುನಾ ತಮ್ಮ ಮನೆಗಳಿಗೆ ಧಾವಿಸಿದ್ದಾರೆ. ಮನೆಯನ್ನು ಸರಿ ಪಡಿಸುವ ಕೆಲಸದಲ್ಲಿ ತೊಡಗಿದ್ದು, ಸರ್ಕಾರದ ವತಿಯಿಂದ ಕೂಡಲೇ ಪರಿಹಾರ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಈ ಮಧ್ಯೆ ಸಿಎಂ ಯಡಿಯೂರಪ್ಪ ಇಂದು ಪ್ರವಾಹ ಪೀಡಿದ ಸ್ಥಳಗಳಾದ ನಂಜನಗೂಡು ಪ್ರದೇಶಗಳಿಗೆ ಭೇಟಿ ನೀಡಿ ನಂತರ ರಾತ್ರಿ 7ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.