ಮೈಸೂರು: ಕೊರೊನಾ ಮಹಾಮಾರಿ ನಡುವೆಯೂ ನಂಜನಗೂಡಿನ ನಂಜುಂಡೇಶ್ವರ ದೇವಾಲಯಕ್ಕೆ ಭಕ್ತಾದಿಗಳಿಂದ ವಿವಿಧ ಮೂಲಗಳಿಂದ 1.98 ಕೋಟಿ ರೂ. ಆದಾಯ ಬಂದಿದೆ.
ಕೋಟ್ಯಾಧೀಶ್ವರನಾದ ನಂಜುಂಡೇಶ್ವರ ನಂಜನಗೂಡಿನಲ್ಲಿರುವ ನಂಜುಂಡೇಶ್ವರನ ದೇವಾಲಯದಲ್ಲಿ ಎರಡು ತಿಂಗಳ ನಂತರ ಹುಂಡಿ ಹಣ ಎಣಿಕೆ ಮಾಡಲಾಗಿದ್ದು, 1.98 ಕೋಟಿ ರೂಪಾಯಿಗೂ ಅಧಿಕ ಕಾಣಿಕೆ ಸಂಗ್ರಹವಾಗಿದೆ.
ಓದಿ: ಆದಾಯ ವಿಚಾರದಲ್ಲಿ ಭಿನ್ನಾಭಿಪ್ರಾಯ: ನಂಜನಗೂಡಲ್ಲಿ ಸಪ್ತ ದೇವಾಲಯಗಳಿಗೆ ಬೀಗ!
ದೇವಾಲಯದ ಒಟ್ಟು 37 ಹುಂಡಿಗಳ ಪೈಕಿ 31 ಹುಂಡಿಗಳಲ್ಲಿ 1,98,47,290 ರೂ. ನಗದು ಹಾಗೂ 77 ಗ್ರಾಂ ಚಿನ್ನ, 5 ಕೆಜಿ 700 ಗ್ರಾಂ ತೂಕದ ಬೆಳ್ಳಿ ಸಂಗ್ರಹವಾಗಿದೆ. ಹುಂಡಿಯಲ್ಲಿ ಒಟ್ಟು 79,700 ರೂ. ನಿಷೇಧಿತ ನೋಟುಗಳು ಸಿಕ್ಕಿವೆ. ಇವುಗಳಲ್ಲಿ 1 ಸಾವಿರ ಮುಖಬೆಲೆಯ 12 ನೋಟುಗಳು, 500 ರೂ. ಮುಖಬೆಲೆಯ 170 ನೋಟುಗಳು ಪತ್ತೆಯಾಗಿವೆ.
ನಂಜುಂಡೇಶ್ವರ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ವೆಂಕಟೇಶ್ ಪ್ರಸಾದ್ ಹಾಗೂ ಬ್ಯಾಂಕ್ ಆಫ್ ಬರೋಡಾದ ಹಿರಿಯ ಅಧಿಕಾರಿ ಹರ್ಷ ಇವರ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು. 200 ಸ್ವಸಹಾಯ ಸಂಘದ ಮಹಿಳೆಯರು ಸಹಾಯಕರಾಗಿ, 50 ಮಂದಿ ದೇವಾಲಯದ ಸಿಬ್ಬಂದಿ ಸೇರಿದಂತೆ ಒಟ್ಟು 250 ಸಿಬ್ಬಂದಿ ಎಣಿಕೆ ಕಾರ್ಯ ನಡೆಸಿದರು.