ಮೈಸೂರು: ಇಂದಿನ ಮಾರ್ಕೆಟಿಂಗ್ ಯುಗದಲ್ಲಿ ಕಲೆ ಕೂಡ ಮಾರಾಟದ ಸರಕಾಗಿದೆ ಎಂದು ಖ್ಯಾತ ಸಿನಿಮಾ ನಿರ್ದೇಶಕ, ಸಾಹಿತಿ ಡಾ. ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು. ಅಮೃತ ವಿಶ್ವ ವಿದ್ಯಾಪೀಠಂನ ದೃಶ್ಯ ಸಂವಹನ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಮಟ್ಟದ ಕಿರುಚಿತ್ರ ಹಬ್ಬ ಸಿನೆರಮಾ’ ಕಾರ್ಯಕ್ರಮವನ್ನು ಕ್ಲ್ಯಾಪ್ ಮಾಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಕಲೆಯ ಜೀವನದಲ್ಲಿ ಜಗತ್ತಿನೊಂದಿಗೆ ಸ್ಪರ್ಧಿಸಬೇಕಾದ ಅಗತ್ಯವಿದೆ. ಸಾಕಷ್ಟು ಜಾಗತಿಕ ಸವಾಲುಗಳು ಇವೆ. ಇದನ್ನೆಲ್ಲ ಒಪ್ಪಿಕೊಂಡು ನಾವು ಏನನ್ನು ಸೃಷ್ಟಿಸಬೇಕು ಎಂಬುದನ್ನು ದೃಷ್ಟಿಯಲ್ಲಿರಿಸಿಕೊಳ್ಳಬೇಕು. ಈ ಮಾರಾಟದ ವೇಗದಲ್ಲಿ ಸೃಷ್ಟಿ ಕ್ರಿಯೆ ಮತ್ತು ಜನರಿಗೆ ಏನನ್ನು ತಲುಪಿಸಬಹುದು, ಹೇಗೆ ಅರ್ಥ ಮಾಡಿಸಬಹುದು ಎಂಬುದನ್ನು ಯೋಚಿಸಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಸಿನಿಮಾ ಮಾಡಲು ಹಣಬೇಕು. ಅದಕ್ಕಿಂತಲೂ ಹೆಚ್ಚು ಸಿನಿಮಾ ಮಾಡುವ ಹುಚ್ಚು, ಉತ್ಸಾಹವಿರಬೇಕು. ಅದರೊಟ್ಟಿಗೆ ಸಾಮಾಜಿಕ ಜವಾಬ್ದಾರಿಯಿಂದ ಸಿನಿಮಾ ಮಾಡಬೇಕು. ದೃಶ್ಯ ಮಾಧ್ಯಮವಾಗಿರುವ ಸಿನಿಮಾ ಎಂಬುದು ಪರಿಣಾಮಕಾರಿಯಾದದ್ದು. ಇತ್ತೀಚಿನ ದಿನಗಳಲ್ಲಿ ಜನರು ನೋಡುಗರಾಗುತ್ತಿದ್ದಾರೆ. ಓದುವ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಆದರೆ, ಸಿನಿಮಾ ಮಾಡುವ ಉತ್ಸಾಹವಿರುವವರು, ಹೆಚ್ಚು ಸಾಹಿತ್ಯವನ್ನು ಓದಿಕೊಳ್ಳಬೇಕು, ರಂಗಭೂಮಿಯ ಚಟುವಟಿಕೆಗಳ ಬಗ್ಗೆ ಅರಿವು ಇರಬೇಕು. ಆಗ ಸಿನಿಮಾ ಕ್ಷೇತ್ರದಲ್ಲಿ ಪೂರಕವಾಗಿ, ಅಚ್ಚುಕಟ್ಟಾಗಿ ಕೆಲಸ ಮಾಡಲು ಸುಲಭವಾಗಲಿದೆ ಎಂದು ಹಿರಿಯ ನಿರ್ದೇಶಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ನಟ ಮಂಡ್ಯ ರಮೇಶ್, ನಿರ್ದೇಶಕರಾಗಲು ಬಯಸುವವರಿಗೆ ಸಾಹಿತ್ಯ ಪ್ರಜ್ಞೆ ಇರಬೇಕು. ವಿಷಯಗಳಲ್ಲಿ ಪ್ರತಿನಿತ್ಯ ಅಪ್ಡೇಟ್ ಆಗಬೇಕು. ಕುತೂಹಲಿಯಾಗಿರಬೇಕು, ಹಠದ ಮೇಲೆ ಕೆಲಸ ಮಾಡಬೇಕು. ಸೂಕ್ಷ್ಮತೆ ಇರಬೇಕು. ಚಳವಳಿ, ಸಾಹಿತ್ಯ ಚಟುವಟಿಕೆಯಲ್ಲಿ ಭಾಗವಹಿಸಬೇಕು. ಜಾತ್ಯತೀತ ಮನೋಭಾವ ಹೊಂದಿರಬೇಕು, ನಿರಂತರ ಅಧ್ಯಯನ ಶೀಲರಾಗಿರಬೇಕು ಎಂದು ಸಲಹೆ ನೀಡಿದರು. ಸಿನಿಮಾ ನಟರು ಜಿಮ್ನಲ್ಲಿ ಹುಟ್ಟುವುದಿಲ್ಲ, ನಟಿಯರು ಬ್ಯೂಟಿ ಪಾರ್ಲರ್ನಲ್ಲಿಯೂ ಸೃಷ್ಟಿಯಾಗುವುದಿಲ್ಲ. ಸಂತೆ, ಜಾತ್ರೆ, ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಅವರು ಸಿಗಬಹುದು. ಸೂಕ್ಷ್ಮತೆ ಮತ್ತು ಗ್ರಹಿಕೆಯ ಮನೋಭಾವದಿಂದ ನಟ-ನಟಿಯರು ಹುಟ್ಟುತ್ತಾರೆ. ಯಾವುದೇ ಕೆಲಸದಲ್ಲಿ ಶ್ರದ್ಧೆ, ಮನಸ್ಸಿಟ್ಟು ಕೆಲಸ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದರು.