ಮೈಸೂರು:ದೇಶದಲ್ಲೇ ಅತಿ ಹೆಚ್ಚು ಹುಲಿಗಳಿರುವುದು ಮೈಸೂರು ಜಿಲ್ಲೆಯ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ. 2018-19ರ ಹುಲಿ ಗಣತಿಯ ಪ್ರಕಾರ, ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಹುಲಿ ಹೊಂದಿರುವ 2ನೇ ರಾಜ್ಯವಾಗಿದೆ.
ರಾಜ್ಯದಲ್ಲಿ ಒಟ್ಟು 524 ಹುಲಿಗಳಿದ್ದು, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ 127 ಹುಲಿಗಳಿವೆ. ಬಂಡೀಪುರದಲ್ಲಿ 160 ಹುಲಿಗಳಿವೆ. ಅಂದರೆ ದೇಶದ ಒಟ್ಟು ಹುಲಿಗಳ ಸಂಖ್ಯೆಯಲ್ಲಿ ಅರ್ಧಕ್ಕಿಂತ ಹೆಚ್ಚು ಹುಲಿಗಳು ಬಂಡೀಪುರ, ನಾಗರಹೊಳೆ ಪ್ರದೇಶದಲ್ಲಿವೆ. ಇದಕ್ಕೆ ಪ್ರಮುಖ ಕಾರಣ ಬಂಡೀಪುರ, ನಾಗರಹೊಳೆ ಹುಲಿಗಳ ವಾಸಸ್ಥಾನಕ್ಕೆ ಹಾಗೂ ಸಂತಾನಾಭಿವೃದ್ಧಿಗೆ ಸೂಕ್ತ ಪ್ರದೇಶವಾಗಿರುವುದು. ಹಾಗೆಯೇ ಇಲ್ಲಿ ಹುಲಿಗಳ ಸಂರಕ್ಷಣೆಗಾಗಿ ಅತಿ ಹೆಚ್ಚು ಕ್ರಮಗಳನ್ನು ಕೈಗೊಂಡಿದ್ದು ಸಂತತಿ ಹೆಚ್ಚಲು ಕಾರಣವಾಗಿದೆ.
ನಾಗರಹೊಳೆಯಲ್ಲಿ 200 ಚದರ ಕಿಲೋಮೀಟರ್ ಬಫರ್ ವಲಯ ಸೇರಿ ಒಟ್ಟು 843 ಚದರ ಕಿಲೋಮೀಟರ್ ವ್ಯಾಪ್ತಿಯನ್ನು ಹುಲಿ ಸಂರಕ್ಷಣೆಗಾಗಿ ಮೀಸಲಿಡಲಾಗಿದೆ. 2020 ರ ಏಪ್ರಿಲ್‌ನಲ್ಲಿ ಕ್ಯಾಮರಾ ಟ್ರ್ಯಾಪ್ ಮೂಲಕ ಹುಲಿ ಗಣತಿ ನಡೆಸಲಾಗಿದ್ದು, ಈ ಬಾರಿ ಎಷ್ಟು ಹುಲಿಗಲಿವೆ? ಎಂಬುದು 2 ತಿಂಗಳಿನಲ್ಲಿ ತಿಳಿಯಲಿದೆ. ಜೊತೆಗೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳು ಹೆಚ್ಚಾಗಿ ವಾಸಿಸಲು ಕಾರಣ, ಇವುಗಳಿಗೆ ಪ್ರಮುಖ ಆಹಾರವಾದ ಜಿಂಕೆ ಮತ್ತು ಕಡವೆಗಳು ಹೆಚ್ಚು ಇರುವುದು. ಜೊತೆಗೆ ಇಲ್ಲಿನ ಅರಣ್ಯ ಪ್ರದೇಶದಲ್ಲಿ ಹುಲಿಗಳನ್ನು ಕೊಲ್ಲದ ರೀತಿಯಲ್ಲಿ 54 ಹುಲಿ ಭೇಟೆ ನಿಗ್ರಹ ಶಿಬಿರಗಳಿದ್ದು, ಪ್ರತಿ ಶಿಬಿರಕ್ಕೆ 4 ಜನ ಸಿಬ್ಬಂದಿಗಳನ್ನು ನೇಮಿಸಲಾಗದೆ ಎಂದು ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ವಿವರಿಸುತ್ತಾರೆ.