ಮೈಸೂರು:ಅಂತಾರಾಷ್ಟ್ರೀಯ ನಿವೃತ್ತ ಕ್ರಿಕೆಟಿಗ ಹಾಗೂ ಐಸಿಸಿ ಕ್ರಿಕೆಟ್ ಪಂದ್ಯಗಳ ರೆಫ್ರಿ ಜಾವಗಲ್ ಶ್ರೀನಾಥ್ ಸೇರಿದಂತೆ ಮೂವರು ಗಣ್ಯರಿಗೆ, ಮೈಸೂರು ವಿವಿಯ 103ನೇ ವಾರ್ಷಿಕ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಾಗುವುದು ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊಫೆಸರ್ ಎನ್.ಕೆ. ಲೋಕನಾಥ್ ಪತ್ರಿಕಾಗೋಷ್ಠಿಯಲ್ಲಿ ಘಟಿಕೋತ್ಸವದ ಬಗ್ಗೆ ಮಾಹಿತಿ ನೀಡಿದರು.
ಇಂದು ಮೈಸೂರು ವಿಶ್ವವಿದ್ಯಾನಿಲಯದ ಕ್ರಾಫರ್ಡ್ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಎನ್ ಕೆ.ಲೋಕನಾಥ್, ಮೈಸೂರು ವಿವಿಯ 103 ನೇ ವಾರ್ಷಿಕ ಘಟಿಕೋತ್ಸವ ಅಕ್ಟೋಬರ್ 18ರಂದು ಮೈಸೂರು ವಿವಿಯ ಕ್ರಾಫರ್ಡ್ ಭವನದಲ್ಲಿ ನಡೆಯಲಿದೆ. ಈ ಬಾರಿ ಅಂತಾರಾಷ್ಟ್ರೀಯ ನಿವೃತ್ತ ಕ್ರಿಕೆಟಿಗ ಹಾಗೂ ಹಾಲಿ ಐಸಿಸಿ ಕ್ರಿಕೆಟ್ ಪಂದ್ಯಗಳ ತೀರ್ಪುಗಾರ ಜಾವಗಲ್ ಶ್ರೀನಾಥ್, ನಾಡೋಜ ವಿಶ್ರಾಂತ ವೈದ್ಯಕೀಯ ಪ್ರಾಧ್ಯಾಪಕ ಹಾಗೂ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯದ ವಿಶ್ರಾಂತ ವೈದ್ಯಕೀಯ ಪ್ರಾಧ್ಯಾಪಕ ಡಾ.ಪಿ ಎಸ್.ಶಂಕರ್ ಹಾಗೂ ಮೈಸೂರು ಸ್ಥಳೀಯ ಪತ್ರಿಕೆಯ ಪ್ರಧಾನ ಸಂಪಾದಕ ಕೆ ಬಿ.ಗಣಪತಿ ಸೇರಿದಂತೆ ಮೂವರಿಗೆ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ವಿವರಿಸಿದರು.
32,240 ಮಂದಿಗೆ ಪದವಿ ಪ್ರದಾನ:ಈ ಬಾರಿಯ ಘಟಿಕೋತ್ಸವದಲ್ಲಿ 32,240ಮಂದಿಗೆ ವಿವಿಧ ಪದವಿ ಪ್ರದಾನ, 539 ಮಂದಿಗೆ ಪಿಎಚ್ಡಿ ಪದವಿ ಪ್ರಮಾಣ ಪತ್ರ, 420 ಪದಕಗಳು ಮತ್ತು 275 ಬಹುಮಾನಗಳನ್ನು 249 ಅಭ್ಯರ್ಥಿಗಳು ಪಡೆದಿದ್ದಾರೆ. ಇದರ ಜೊತೆಗೆ 5,627 ಮಂದಿಗೆ ಸ್ನಾತಕೋತ್ತರ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪದವಿ, ಸ್ನಾತಕೋತ್ತರ ಪದವಿ, ಪಿಎಚ್ ಡಿ ಪದವಿ, ಪದಕಗಳು ಹಾಗೂ ಬಹುಮಾನಗಳನ್ನು ಪಡೆದ ಅಭ್ಯರ್ಥಿಗಳ ವಿವರಗಳನ್ನು ನೀಡಿದರು.