ಮೈಸೂರು: ಕೇಂದ್ರ ಸರ್ಕಾರದ ಆತ್ಮನಿರ್ಭರ ಭಾರತದ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಲ್ಲಿ ಮೈಸೂರು ಜಿಲ್ಲೆಯ, ‘ಮೈಸೂರು ಬಾಳೆ’, ‘ನಂಜನಗೂಡಿನ ರಸಬಾಳೆ’ ಸೇರಿದಂತೆ ಇತರ ಬಾಳೆಯನ್ನು ಆಯ್ಕೆ ಮಾಡಲಾಗಿದೆ.
ಕಿರು ಆಹಾರ ಸಂರಕ್ಷಣಾ ಘಟಕಗಳ ಉತ್ತೇಜನಕ್ಕೆ ಕೇಂದ್ರ ಸರ್ಕಾರ ರೂಪಿಸಿರುವ ಒನ್ ಡಿಸ್ಟ್ರಿಕ್ಟ್, ಒನ್ ಪ್ರಾಡಕ್ಟ್ಗೆ ನಂಜನಗೂಡಿನ ರಸಬಾಳೆ, ಮೈಸೂರು ಬಾಳೆಗಳು ಆಯ್ಕೆ ಆಗಿದೆ.
ಆತ್ಮನಿರ್ಭರ ಭಾರತದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಯೋಜನೆಯಲ್ಲಿ ಮೈಸೂರು ಬಾಳೆಗೆ ಉತ್ತೇಜನ ಈ ರಸಬಾಳೆಯನ್ನು ಮೈಸೂರು ಜಿಲ್ಲೆಯ ಬಹುತೇಕ ಕಡೆ ಬೆಳೆಯಲು ಸಾಲ ಸೌಲಭ್ಯ ನೀಡಲು ಹಾಗೂ ಈ ಬೆಳೆಗೆ ಸಂಬಂಧಿಸಿದಂತೆ ಕಿರು ಆಹಾರ ಸಂರಕ್ಷಣಾ ಘಟಕಗಳಿಗೆ ಉತ್ತೇಜನ ನೀಡಲು, ತರಬೇತಿ ಹಾಗೂ ಮಾರುಕಟ್ಟೆಯಲ್ಲಿ ಬೆಂಬಲ ನೀಡಲು ಈ ಬೆಳೆಗಳಿಗೆ 10 ಲಕ್ಷ ರೂ. ಸಾಲ ಸೌಲಭ್ಯ ನೀಡಲು ಯೋಜನೆ ರೂಪಿಸಲಾಗಿದ್ದು, ಇದರಲ್ಲಿ ಶೇ 35ರಷ್ಟು ಸಹಾಯ ಧನ ನೀಡಲು ಸರ್ಕಾರ ನಿರ್ಧರಿಸಿದೆ.
ಜಿಲ್ಲೆಯಲ್ಲಿ ನಂಜನಗೂಡು ರಸಬಾಳೆ, ಪಚ್ಚ ಬಾಳೆ ಹಾಗೂ ಏಲಕ್ಕಿ ಬಾಳೆಗಳನ್ನು ಸುಮಾರು 10 ಸಾವಿರ ಹೆಕ್ಟೇರ್ನಲ್ಲಿ ಬೆಳೆಯಲು ತೀರ್ಮಾನಿಸಲಾಗಿದ್ದು, ಈ ಬಾಳೆಗಳನ್ನು ಬೆಳೆಯುವ ರೈತರಿಗೆ ತರಬೇತಿ ನೀಡಲು ತೋಟಗಾರಿಕೆ ಇಲಾಖೆ ಸಿಎಫ್ಟಿಆರ್ಐ ನೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಇದೇ ತಿಂಗಳ 11ರಿಂದ ತರಬೇತಿ ನೀಡಲಾಗುವುದು ಎಂದು ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ರುದ್ರೇಶ್ ಈಟಿವಿ ಭಾರತ್ಗೆ ದೂರವಾಣಿಯಲ್ಲಿ ಮಾಹಿತಿ ನೀಡಿದ್ದಾರೆ.
ಇದರ ಜೊತೆಗೆ ಕೊಡಗು ಜಿಲ್ಲೆಯ ಕಾಫಿ ಬೆಳೆ, ಮಂಡ್ಯದ ಬೆಲ್ಲ, ಹಾಸನದ ತೆಂಗು, ಚಾಮರಾಜನಗರ ಜಿಲ್ಲೆಯ ಅರಿಶಿಣ ಉತ್ಪನ್ನಗಳು ಒಂದು ಜಿಲ್ಲೆ, ಒಂದು ಉತ್ಪನ್ನ ಎಂಬ ಯೋಜನೆಯಡಿ ಆಯ್ಕೆಯಾಗಿವೆ.
ಇದನ್ನೂ ಓದಿ:ಭೂ ವಿವಾದ; ಖಾರದಪುಡಿ ಎರಚಿ ಕಾದಾಟ.. ಮಹಿಳೆ ಸಾವು!