ಕರ್ನಾಟಕ

karnataka

ETV Bharat / state

ಅರಮನೆಯಲ್ಲಿ ಶರನ್ನವರಾತ್ರಿ: ರಕ್ತ ಚಿಮ್ಮುವ 'ವಜ್ರಮುಷ್ಠಿ ಕಾಳಗ' ಹೇಗೆ ನಡೆಯುತ್ತೆ ಗೊತ್ತೇ? - ಶರನ್ನವರಾತ್ರಿಯ ವಿಜಯದಶಮಿಯ ದಿನ

ಮೈಸೂರು ಅರಮನೆಯಲ್ಲಿ ಶರನ್ನವರಾತ್ರಿ ಉತ್ಸವದ ವೇಳೆ 'ವಜ್ರಮುಷ್ಠಿ ಕಾಳಗ' ವಿಶೇಷವಾಗಿ ಗಮನ ಸೆಳೆಯುತ್ತದೆ.

ವಜ್ರಮುಷ್ಠಿ ಕಾಳಗ
ವಜ್ರಮುಷ್ಠಿ ಕಾಳಗ

By ETV Bharat Karnataka Team

Published : Oct 13, 2023, 9:54 PM IST

Updated : Oct 13, 2023, 10:55 PM IST

ಉಸ್ತಾದ್ ಮಾಧವ್ ಜಟ್ಟಿ 'ಈಟಿವಿ ಭಾರತ್' ಜೊತೆ ಮಾತನಾಡಿದರು.

ಮೈಸೂರು: ರಾಜಪರಂಪರೆಯ ಶರನ್ನವರಾತ್ರಿ ವಿಜಯದಶಮಿಯ ದಿನ ರಾಜವಂಶಸ್ಥರು ವಿಜಯ ಯಾತ್ರೆಗೆ ಹೋಗುವ ಮುನ್ನ ಅರಮನೆಯ ಕನ್ನಡಿ ತೊಟ್ಟಿಯಲ್ಲಿ ಜಟ್ಟಿಗಳಿಂದ ಆಯೋಜಿಸುವ 'ಜಟ್ಟಿ ಕಾಳಗ' ಅಥವಾ 'ವಜ್ರಮುಷ್ಠಿ ಕಾಳಗ'ಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ.

ಜಟ್ಟಿ ಕಾಳಗದ ಇತಿಹಾಸ: ಜಟ್ಟಿ ಕಾಳಗಕ್ಕೆ ವಜ್ರಮುಷ್ಟಿ ಕಾಳಗ ಎನ್ನಲಾಗುತ್ತದೆ. ಜಟ್ಟಿಗಳು ನಡೆಸಿಕೊಡುವ ವಜ್ರಮುಷ್ಟಿ ಕಾಳಗ ಮಹಾಭಾರತದ ಕೃಷ್ಣನ ಕಾಲದಿಂದಲೂ ಇದೆ. ಈಗಲೂ ಅದನ್ನು ರಾಜವಂಶಸ್ಥರು ಆಚರಿಸಿಕೊಂಡು ಬರುತ್ತಿದ್ದಾರೆ. ಶರನ್ನವರಾತ್ರಿಯ ವಿಜಯದಶಮಿಯ ದಿನ ವಿಜಯಯಾತ್ರೆಗೆ ಮುಂಚೆ ಅರಮನೆಯ ಆನೆ ಬಾಗಿಲಿನ ಮೂಲಕ ಹೋಗಿ ಒಳಗಿರುವ ಕನ್ನಡಿ ತೊಟ್ಟಿಯಲ್ಲಿ ವಜ್ರಮುಷ್ಟಿ ಕಾಳಗವನ್ನು ಏರ್ಪಾಡು ಮಾಡಲಾಗುತ್ತಿದೆ. ವಜ್ರಮುಷ್ಟಿ ಕಾಳಗದಲ್ಲಿ ಎರಡು ಜೋಡಿ ಜಟ್ಟಿಗಳು ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದು ಕಾಳಗ ನಡೆಸುವರು.

ಜಟ್ಟಿಗಳು ಯಾರು?: ಇತಿಹಾಸ ಕಾಲದಿಂದ ಜಟ್ಟಿ ಜನಾಂಗದವರು ರಾಜ ಮನೆತನದಲ್ಲಿ ವಜ್ರಮುಷ್ಟಿ ಕಾಳಗ ನಡೆಸಿಕೊಂಡು ಬರುತ್ತಿದ್ದಾರೆ. ಈಗ ಮೈಸೂರು, ಚಾಮರಾಜನಗರ, ಚನ್ನಪಟ್ಟಣ ಹಾಗೂ ಬೆಂಗಳೂರಿನಲ್ಲಿ ವಾಸವಿರುವ ಜಟ್ಟಿ ಜನಾಂಗದವರು ಒಂದೊಂದು ಪ್ರದೇಶದಿಂದ ಇಬ್ಬರು ಜಟ್ಟಿಗಳನ್ನು ಆಯ್ಕೆ ಮಾಡಿ ಮಹಾರಾಣಿ ಹಾಗೂ ಮಹಾರಾಜರ ಮುಂದೆ ತಂದು ನಿಲ್ಲಿಸುತ್ತಾರೆ.

ಆಗ ಮಹಾರಾಣಿಯವರು ಈ ಬಾರಿ ಜಟ್ಟಿ ಕಾಳಗದಲ್ಲಿ ಭಾಗವಹಿಸುವ ಎರಡು ಜೋಡಿಯನ್ನು ಆಯ್ಕೆ ಮಾಡಿ ಜಟ್ಟಿ ಕಾಳಗ ನಡೆಸುವ ಗುರುಗಳಿಗೆ ಸೂಚಿಸುತ್ತಾರೆ. ಬಳಿಕ ವಜ್ರಮುಷ್ಟಿ ಕಾಳಗ ರಾಜ ಪರಂಪರೆಯಂತೆ ಸಾಗುತ್ತದೆ. ವಜ್ರಮುಷ್ಟಿ ಕಾಳಗಕ್ಕೆ ಆಯ್ಕೆಯಾದ ನಾಲ್ಕು ಜೋಡಿಗಳಿಗೆ 45 ದಿನಗಳಿಗೆ ಮುಂಚೆ ತರಬೇತಿ ನೀಡಲಾಗುತ್ತದೆ. ಜಟ್ಟಿಗಳು ಶ್ರದ್ಧಾಭಕ್ತಿಯಿಂದ ಹಾಗೂ ಸಸ್ಯಹಾರಿ ಆಹಾರಗಳನ್ನು ಮಾತ್ರ ಸೇವನೆ ಮಾಡಬೇಕು.

ವಜ್ರಮುಷ್ಠಿ ಕಾಳಗ

ವಿಜಯದಶಮಿಯ ದಿನ ವಜ್ರಮುಷ್ಟಿ ಕಾಳಗ:ವಿಜಯದಶಮಿಯಂದು ಮೈಸೂರು ಅರಮನೆಯ ಕನ್ನಡಿ ತೊಟ್ಟಿಯಲ್ಲಿ ನಡೆಯುವ ವಜ್ರಮುಷ್ಟಿ ಕಾಳಗದಲ್ಲಿ ಜಟ್ಟಿಗಳು ಭಾಗವಹಿಸುವರು. ವಿಜಯ ಯಾತ್ರೆ ಹೊರಡುವ ಮುನ್ನ ರಾಜರ ಸಮ್ಮುಖದಲ್ಲಿ ಈ ಕಾಳಗ ನಡೆಯುತ್ತದೆ. ರಾಜರಿಗೆ ನಮಸ್ಕರಿಸಿ ಕೆಲವೇ ಸೆಕೆಂಡುಗಳಲ್ಲಿ ಎರಡು ಜೋಡಿ ಜಟ್ಟಿಗಳು ಕೈ ಬೆರಳುಗಳಲ್ಲಿ ಧರಿಸಿರುವ ಕಾಡಿನ ಕೋಣದ ಕೊಂಬಿನ ಆಯುಧದಿಂದ ಪೈಪೋಟಿ ನಡೆಸುವರು. ತಲೆಯಿಂದ ರಕ್ತ ಚಿಮ್ಮಿದಾಗ ವಜ್ರಮುಷ್ಟಿ ಕಾಳಗ ಕೊನೆಗೊಳ್ಳುತ್ತದೆ. ಈ ಕಾಳಗದಲ್ಲಿ ರಕ್ತ ಚಿಮ್ಮಿದ ಜಟ್ಟಿಗಳು ರಾಜರಿಗೆ ನಮಸ್ಕರಿಸಿದ ಬಳಿಕ ರಾಜರು ಅರಮನೆಯಿಂದ ವಿಜಯ ಯಾತ್ರೆ ನಡೆಸಿ ಬನ್ನಿ ಪೂಜೆ ಸಲ್ಲಿಸಿ ವಾಪಸ್ ಅರಮನೆಗೆ ಆಗಮಿಸಿ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವರು. ಹೀಗೆ ವಜ್ರಮುಷ್ಟಿ ಕಾಳಗ ರಾಜವಂಶಸ್ಥರ ಕಾಲದಿಂದಲೂ ನಡೆದುಕೊಂಡು ಬರುತ್ತಿದೆ ಎಂದು ಉಸ್ತಾದ್ ಮಾದವ್ ಜಟ್ಟಿ 'ಈಟಿವಿ ಭಾರತ್'​ಗೆ ವಿವರಿಸಿದರು.

ಇದನ್ನೂ ಓದಿ:ಅ.15ಕ್ಕೆ ದಸರಾ ಮಹೋತ್ಸವ ಉದ್ಘಾಟನೆ: ಏಕಮುಖ ಸಂಚಾರ, ನಿರ್ಬಂಧಿಸಿರುವ ರಸ್ತೆಗಳ ಮಾಹಿತಿ ಇಂತಿದೆ

Last Updated : Oct 13, 2023, 10:55 PM IST

ABOUT THE AUTHOR

...view details