ಮೈಸೂರು:ವಿಶ್ವವಿಖ್ಯಾತ ಸಾಂಪ್ರದಾಯಿಕ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ವಿಜಯದಶಮಿ ಮೆರವಣಿಗೆಗೆ ಸಕಲ ಸಿದ್ಧತೆಗಳು ಭರದಿಂದ ಸಾಗಿವೆ. ಚಿನ್ನದ ಅಂಬಾರಿಯಲ್ಲಿ ಆಸೀನಳಾಗುವ ನಾಡದೇವತೆ ಶ್ರೀ ಚಾಮುಂಡೇಶ್ವರಿಗೆ ಗಣ್ಯರು ಪುಷ್ಪಾರ್ಚನೆ ಮಾಡುವ ಮೂಲಕ ವೈಭವದ ಜಂಬೂ ಸವಾರಿ ಮೆರವಣಿಗೆಗೆ ವಿಧ್ಯುಕ್ತ ಚಾಲನೆ ಸಿಗಲಿದೆ.
ಜಂಬೂಸವಾರಿ ಮೆರವಣಿಗೆಗೆ 47 ಸ್ತಬ್ಧಚಿತ್ರಗಳು ಹಾಗೂ ಕಲಾತಂಡಗಳು ಸಿದ್ಧವಾಗಿವೆ. ಮಧ್ಯಾಹ್ನ 1.46 ರಿಂದ 2.08 ರ ಶುಭ ಮಕರ ಲಗ್ನದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಗಣ್ಯರು ನಂದಿಧ್ವಜಕ್ಕೆ ಪೂಜೆ ಸಲ್ಲಿಸುವರು. ಈ ಮೂಲಕ ಮೆರವಣಿಗೆಗೆ ಚಾಲನೆ ಸಿಗಲಿದೆ. ಆ ನಂತರ ಸ್ತಬ್ಧಚಿತ್ರಗಳು, ಕಲಾತಂಡಗಳು ನಿಶಾನೆ ಆನೆಗಳು ಮೆರವಣಿಗೆ ಹೊರಡಲಿವೆ.
ಸಂಜೆ 4.40 ರಿಂದ 5 ವರೆಗೆ ಸಲ್ಲುವ ಶುಭ ಮೀನ ಮುಹೂರ್ತದಲ್ಲಿ ಅಭಿಮನ್ಯು ಆನೆ ಹೊತ್ತ ಶ್ರೀ ಚಾಮುಂಡೇಶ್ವರಿ ದೇವಿಗೆ ಗಣ್ಯರು ಪುಷ್ಪಾರ್ಚನೆ ಮಾಡುವರು. ಈ ಮೂಲಕ ಮೆರವಣಿಗೆ ಪ್ರಾರಂಭವಾಗಲಿದ್ದು, ಸುಮಾರು 5 ಕಿ.ಮೀ ದೂರ ರಾಜಪಥದಲ್ಲಿ ಸಾಗಲಿದೆ. ನಂತರ ಈ ಮೆರವಣಿಗೆ ಬನ್ನಿಮಂಟಪದಲ್ಲಿ ಕೊನೆಗೊಳ್ಳಲಿದೆ. ಮೆರವಣಿಗೆಯಲ್ಲಿ ನಾಡಿನ ಕಲೆ, ಸಂಸ್ಕೃತಿ, ಸರ್ಕಾರದ ಯೋಜನೆಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಇರಲಿವೆ.