ಮೈಸೂರು: ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು ಏಳನೇ ಆರೋಪಿಯನ್ನು ತಮಿಳುನಾಡಿನ ತಿರುಪ್ಪೂರಿನ ಬಳಿ ಬಂಧಿಸಿದ್ದರು. ಆರೋಪಿಯನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ ಪೊಲೀಸರು ಹತ್ತು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ಪೊಲೀಸರು, ಓರ್ವ ಬಾಲಾಪರಾಧಿ ಸೇರಿ ಆರು ಮಂದಿಯನ್ನು ಬಂಧಿಸಿದ್ದರು. ತಲೆ ಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿಯನ್ನು ತಮಿಳುನಾಡಿನ ತಿರುಪ್ಪೂರಿನಲ್ಲಿ ಬಂಧಿಸಿ, ನಿನ್ನೆ ಮೈಸೂರಿಗೆ ಕರೆ ತಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು.
ಅತ್ಯಾಚಾರ ನಡೆದಿದ್ದ ಸ್ಥಳಕ್ಕೆ ಆರೋಪಿಯನ್ನು ಕರೆದೊಯ್ದ ಪೊಲೀಸರು, ಮಹಜರು ನಡೆಸಿದರು. ನಂತರ ಬಂಡೀಪಾಳ್ಯದ ಎಪಿಎಂಸಿ ಮಾರುಕಟ್ಟೆಯ ಸ್ಥಳಕ್ಕೆ ಕರೆದುಕೊಂಡು ಹೋಗಿ, ಆತನ ಮದ್ಯ ಖರೀದಿಸುತ್ತಿದ್ದ ಅಂಗಡಿಯನ್ನು ಮಹಜರು ಮಾಡಿದರು.
‘ನಾವು ಏಳು ಜನರು ಕೂಲಿ ಕೆಲಸ ಮಾಡುತ್ತಿದ್ದು, ತಮಿಳುನಾಡಿನಿಂದ ತಂದ ವಸ್ತುಗಳನ್ನು ಬಂಡೀಪಾಳ್ಯದ ಮಾರುಕಟ್ಟೆಯಲ್ಲಿ ಇಳಿಸುತ್ತಿದ್ದೆವು. ನಂತರ ಮದ್ಯ ಖರೀದಿಸಿ ನಿರ್ಜನ ಪ್ರದೇಶದಲ್ಲಿ ಮದ್ಯ ಸೇವಿಸುತ್ತಿದ್ದೆವು ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದೇನೆ. ಆಗಸ್ಟ್ 24 ರ ಪ್ರಕರಣ ನಡೆದ ರಾತ್ರಿ ಲಲಿತಾದ್ರಿಪುರದ ನಿರ್ಜನ ಪ್ರದೇಶದಲ್ಲಿ ಎಲ್ಲರೂ ಮದ್ಯಸೇವನೆ ಮಾಡುತ್ತಿದ್ದೆವು.
ಆ ಸ್ಥಳದಲ್ಲಿ ಯುವಕ ಮತ್ತು ಯುವತಿ ಇದ್ದರು. ಆಗ ನಾವು ಹೆದರಿಸಿ ಹಣ ದೋಚಲು ಹೋದೆವು. ಆದರೆ, ಅವರ ಬಳಿ ಹಣ ಇರಲಿಲ್ಲ. ಆಗ ಯುವತಿಯನ್ನು ಎಳೆದೊಯ್ದು ಕೃತ್ಯ ನಡೆಸಿ ಪರಾರಿಯಾದೆವು ಎಂದು ಬಂಧಿತ ಏಳನೇ ಆರೋಪಿ ಪೊಲೀಸರ ತನಿಖೆ ವೇಳೆಯಲ್ಲಿ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಇದನ್ನೂ ಓದಿ: ಬ್ರಹ್ಮಪುತ್ರದಲ್ಲಿ ಬೋಟ್ಗಳ ಡಿಕ್ಕಿ ಪ್ರಕರಣ: ಓರ್ವ ಮಹಿಳೆ ಸಾವು, 35 ಮಂದಿ ಕಣ್ಮರೆ
ಈಗಾಗಲೇ 14 ದಿನಗಳ ನ್ಯಾಯಾಂಗ ಬಂಧನದಲ್ಲಿರುವ ಐವರು ಆರೋಪಿಗಳು ಹಾಗೂ ಬಾಲಾಪರಾಧಿಯನ್ನು ಅಗತ್ಯ ಬಿದ್ದರೆ ಮತ್ತೆ ಪೊಲೀಸ್ ಕಸ್ಟಡಿಗೆ ಪಡೆದು ಏಳನೇ ಆರೋಪಿ ನೀಡಿದ ಮಾಹಿತಿಯ ಬಗ್ಗೆ ಹೆಚ್ಚಿನ ತನಿಖೆ ನಡೆಸಲು ತನಿಖಾ ತಂಡ ಸಿದ್ಧತೆ ನಡೆಸಿದೆ ಎನ್ನಲಾಗಿದೆ. ಈ ಮಧ್ಯೆ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸಂತ್ರಸ್ತೆಯಾಗಿರುವ ವಿದ್ಯಾರ್ಥಿನಿ ಹೇಳಿಕೆ ಹಾಗೂ ಈ ಬಂಧಿತ ಆರೋಪಿಗಳ ಗುರುತು ಪತ್ತೆ ಹಚ್ಚಿಸಲು ತನಿಖಾ ತಂಡ ಸಿದ್ದತೆ ಮಾಡಿಕೊಂಡಿದೆ ಎನ್ನಲಾಗಿದೆ.