ಮೈಸೂರು: ಬಿರು ಬಿಸಿಲಿನ ಬೇಗೆ ಶುರುವಾಗುತ್ತಿದ್ದಂತೆ ಕಾಡಿನ ಮೇಲೆ ವಿಶೇಷ ಕಾಳಜಿವಹಿಸಿರುವ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿಯ ಕೆನ್ನಾಲಿಗೆಯಿಂದ ಅರಣ್ಯ ಕಾಪಾಡಲು ಎಚ್ಚರ ವಹಿಸಿದ್ದಾರೆ. ನಾಗರಹೊಳೆಯ ಅಂತರಸಂತೆ ವಲಯದಲ್ಲಿ 2021ರಲ್ಲಿ ಉಂಟಾಗಿದ್ದ ಕಾಡ್ಗಿಚ್ಚಿನಿಂದ ಎಚ್ಚೆತ್ತಿರುವ ಅಧಿಕಾರಿಗಳು ಅನಾಹುತ ತಪ್ಪಿಸಲು ಹೆಚ್ಚು ಮುತುವರ್ಜಿ ವಹಿಸಿದ್ದಾರೆ.
ಈಗಾಗಲೇ ಅಂತರಸಂತೆ ವಲಯದಲ್ಲಿ 230 ಕಿ.ಮೀನಷ್ಟು ಬೆಂಕಿ ರೇಖೆಗಳು (ಫೈಯರ್ ಲೈನ್) ಸಿದ್ಧಪಡಿಸಿ ಕಾರ್ಯ ನಿರ್ವಹಿಸಲಾಗುತ್ತಿದೆ. ನಾಗರಹೊಳೆಯ ಮೇಟಿಕುಪ್ಪೆ ಉಪವಿಭಾಗ ವ್ಯಾಪ್ತಿಯಲ್ಲಿ ಸುಮಾರು 900 ಕಿ.ಮೀನಷ್ಟು ಬೆಂಕಿ ರೇಖೆಗಳನ್ನು ನಿರ್ವಹಿಸಲಾಗುತ್ತಿದೆ. ಅರಣ್ಯ ಇಲಾಖೆಯ ಸಿಬ್ಬಂದಿ ಜೊತೆ ಸ್ಥಳೀಯ ಹಾಡಿಗಳಿಂದಲೇ ದಿನಗೂಲಿ ನೌಕರರಾಗಿ ಸುಮಾರು 40 ಜನ ಬೆಂಕಿ ನಂದಿಸುವ ವೀಕ್ಷಕರನ್ನು (ಪಿಸಿಪಿ) ನೇಮಿಸಿಕೊಂಡು ಅವರಿಗೆ ತರಬೇತಿ ನೀಡಿ ಅರಣ್ಯದ ವಿವಿಧ ಭಾಗಗಳಲ್ಲಿ ನೇಮಿಸಲಾಗಿದೆ.
ಅಗ್ನಿಶಾಮಕ ಇಲಾಖೆ ಹಾಜರು: ಬೇಸಿಗೆಯ ಉರಿ ಬಿಸಿಲಿಗೆ ಯಾವ ಕ್ಷಣದಲ್ಲಾದರೂ ಬೆಂಕಿ ಬೀಳುವ ಆತಂಕವಿದೆ. ಅಷ್ಟೇ ಅಲ್ಲ, ಕಿಡಿಗೇಡಿಗಳು ಕಾಡಿಗೆ ಕೊಳ್ಳಿ ಇಡುವ ಸಾಧ್ಯತೆಯೂ ಹೆಚ್ಚಾಗಿದೆ. ಹೀಗಾಗಿ, ಅರಣ್ಯ ಇಲಾಖೆಯ ಜೊತೆಗೆ ಅಗ್ನಿ ಶಾಮಕ ಸಿಬ್ಬಂದಿ ಮತ್ತು ವಾಹನಗಳು ಅರಣ್ಯದ ಅಂಚಿನಲ್ಲಿ ಹಾಗೂ ವಿವಿಧ ಭಾಗಗಳಲ್ಲಿ ಸದಾ ಸನ್ನದ್ಧವಾಗಿರುತ್ತವೆ. ಈ ಸಂಬಂಧ ಈಗಾಗಲೇ ಅಗ್ನಿ ಶಾಮಕ ಇಲಾಖೆಗೆ ತರಬೇತಿ ನೀಡಲಾಗಿದೆ.
ರಾತ್ರಿ ಗಸ್ತು:40 ಸಿಬ್ಬಂದಿಯನ್ನು ಹೆಚ್ಚುವರಿಯಾಗಿ ನೇಮಿಸಿಕೊಂಡಿರುವ ಅಂತರಸಂತೆ ವನ್ಯಜೀವಿ ವಿಭಾಗದಲ್ಲಿ ಶೇ 40 ರಿಂದ 50 ರಷ್ಟು ಸಿಬ್ಬಂದಿಯನ್ನು ವೀಕ್ಷಣಾ ಗೋಪುರಗಳಲ್ಲಿ ರಾತ್ರಿ ಗಸ್ತಿನಲ್ಲಿರಲು ಸೂಚಿಸಲಾಗಿದೆ. ಇದರೊಂದಿಗೆ ಈಗಾಗಲೇ ಹೆಚ್ಚುವರಿ ವಾಹನಗಳು, ತ್ವರಿತ ಪ್ರತಿಕ್ರಿಯೆ ವಾಹನಗಳು, 2000 ಲೀಟರ್ನ ಬೃಹತ್ ನೀರಿನ ಟ್ಯಾಂಕ್ ಹಾಗೂ 1000 ಲೀಟರ್ನ ಟ್ಯಾಂಕ್ ಅನ್ನು ಸಿದ್ಧಪಡಿಸಿಕೊಳ್ಳಲಾಗಿದೆ. ಬ್ಯಾಟರಿ ಚಾಲಿತ ಪವರ್ ಸ್ಪ್ರೇಯರ್, ಬೆನ್ನಿಗೆ ಕಟ್ಟಿಕೊಳ್ಳುವ ಸ್ಪ್ರೇಯರ್ ಸೇರಿದಂತೆ ಬೆಂಕಿ ನಂದಿಸುವ ಉಪಕರಣಗಳನ್ನು ಅರಣ್ಯ ಇಲಾಖೆ ಸಿದ್ಧಪಡಿಸಿಕೊಂಡಿದೆ.