ಮೈಸೂರು:ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿದ ಅಪರಾಧಿಗೆ 10 ವರ್ಷಗಳ ಕಠಿಣ ಸೆರೆಮನೆ ವಾಸ ಹಾಗೂ 35 ಸಾವಿರ ರೂಪಾಯಿ ದಂಡ ವಿಧಿಸಿ ಮೈಸೂರಿನ 7ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು ತೀರ್ಪು ನೀಡಿದೆ. ಹುಣಸೂರು ತಾಲೂಕಿನ ರತ್ನಪುರಿ ಗ್ರಾಮದ ಸಲ್ಮಾನ್ ಖಾನ್ (20) ಶಿಕ್ಷೆಗೆ ಗುರಿಯಾದ ವ್ಯಕ್ತಿ.
ಈತ ಅದೇ ಗ್ರಾಮದ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ, ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ನಡೆಸಿದ್ದರಿಂದ, ಸಂತ್ರಸ್ತೆ ಗರ್ಭಿಣಿಯಾಗಿದ್ದರು. ಬಳಿಕ ಗಂಡು ಮಗುವಿಗೆ ಜನ್ಮ ನೀಡಿದ್ದರು. ನಂತರ ಆರೋಪಿ ಮದುವೆಗೆ ನಿರಾಕರಿಸಿ ವಂಚಿಸಿದ್ದು ಸಂತ್ರಸ್ತೆ ಹುಣಸೂರು ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ತನಿಖಾಧಿಕಾರಿ ಕೆ.ಸಿ.ಪೂವಯ್ಯ ಪ್ರಕರಣದ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪೂರಕ ಸಾಕ್ಷ್ಯಾಧಾರಗಳು ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಎಂ.ರಮೇಶ್ ಅಪರಾಧಿಗೆ ಐಪಿಸಿ ಕಲಂ 376(2) (ಎನ್) ರೀತ್ಯಾ ದಂಡಸಮೇತ ಜೈಲು ಸಜೆ ವಿಧಿಸಿದ್ದಾರೆ. ದಂಡ ಮೊತ್ತದ 35 ಸಾವಿರ ರೂಪಾಯಿಗಳ ಪೈಕಿ 30 ಸಾವಿರ ರೂಪಾಯಿಗಳನ್ನು ಸಂತ್ರಸ್ತೆಗೆ ಪರಿಹಾರವನ್ನಾಗಿ ನೀಡುವಂತೆ, 5 ಸಾವಿರ ರೂಪಾಯಿಗಳನ್ನು ಸರಕಾರಕ್ಕೆ ದಂಡವಾಗಿ ಪಾವತಿಸುವಂತೆ ಆದೇಶಿಸಿದ್ದಾರೆ.