ಮೈಸೂರು: ದಸರಾ ಮಹೋತ್ಸವದ ಪ್ರಮುಖ ಕೇಂದ್ರ ಬಿಂದುವಾದ ಜಂಬೂಸವಾರಿ ಕಣ್ತುಂಬಿಕೊಳ್ಳಲು ಟಿಕೆಟ್ ಇಲ್ಲದೇ ಪರದಾಡುತ್ತಿರುವ ಸಾರ್ವಜನಿಕರಿಗೆ ಜಿಲ್ಲಾಡಳಿತ ಗುಡ್ ನ್ಯೂಸ್ ನೀಡದೆ. ಹೌದು, ಜಂಬೂಸವಾರಿ ವೀಕ್ಷಣೆಗೆ ಗೋಲ್ಡ್ ಕಾರ್ಡ್ ಖರೀದಿಸಲು ಅ.22ರಂದು ಮತ್ತೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ನಾಡಹಬ್ಬ ಮೈಸೂರು ದಸರಾ ನಿಮಿತ್ತ ದೇಶ - ವಿದೇಶಗಳಿಂದ ಆಗಮಿಸುವ ಪ್ರವಾಸಿಗರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ದಸರಾ ಜಂಬೂಸವಾರಿ ಮತ್ತು ಪಂಜಿನ ಕವಾಯಿತು ವೀಕ್ಷಣೆಗೆ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳನ್ನು ಅ.18ರಂದು ಬೆಳಗ್ಗೆ 10ರಿಂದ ಆನ್‌ಲೈನ್ ಮೂಲಕ ನಿಗದಿತ ಹಣ ಪಾವತಿಸಿ ಖರೀದಿಸಲು ಅವಕಾಶ ಕಲ್ಪಿಸಲಾಗಿತ್ತು. ವೆಬ್‌ಸೈಟ್‌ನಲ್ಲಿ ಬಿಡುಗಡೆಗೊಳಿಸಿದ ಕೆಲವೇ ಗಂಟೆಯೊಳಗೆ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳು ಮಾರಾಟವಾಗಿದ್ದವು.
ಆದಾಗ್ಯೂ ಹೆಚ್ಚಿನ ಸಂಖ್ಯೆಯಲ್ಲಿ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್‌ಗಳಿಗೆ ಬೇಡಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ದಸರಾ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡುವ ಉದ್ದೇಶದಿಂದ ಹೆಚ್ಚಿನ ಆಸನಗಳ ವ್ಯವಸ್ಥೆ ಕಲ್ಪಿಸಿ ಆಸನಗಳಿಗೆ ಅನುಗುಣವಾಗಿ ಅ.22ರಂದು ಬೆಳಗ್ಗೆ 10ರಿಂದ ವೆಬ್‌ಸೈಟ್ ಮೂಲಕ ಖರೀದಿಸಲು ಅವಕಾಶ ಕಲ್ಪಿಸಲಾಗಿದೆ. ದಸರಾ ಜಂಬೂಸವಾರಿ ವೀಕ್ಷಣೆಗೆ ಗೋಲ್ಡ್ ಕಾರ್ಡ್ ಖರೀದಿಸಲು 6 ಸಾವಿರ ರೂ., ಟಿಕೆಟ್ ಖರೀದಿಸಲು 3ಸಾವಿರ ರೂ. ಮತ್ತು 2 ಸಾವಿರ ರೂ., ಹಾಗೂ ಪಂಜಿನ ಕವಾಯಿತು ವೀಕ್ಷಣೆಗೆ 500 ರೂ., ಗಳನ್ನು ಪಾವತಿಸಿ ಖರೀದಿಸಬಹುದಾಗಿದೆ.
ಗೋಲ್ಡ್ ಕಾರ್ಡ್ /ಟಿಕೆಟ್ ಖರೀದಿಗಾಗಿ ವೆಬ್‌ಸೈಟ್ ವಿಳಾಸ mysoredasara.gov.in ಸಂಪರ್ಕಿಸಬಹುದಾಗಿದೆ. ಆನ್‌ಲೈನ್ ಹೊರತು ಪಡಿಸಿ ಇತರ ಯಾವುದೇ ರೀತಿಯಲ್ಲಿ ಗೋಲ್ಡ್ ಕಾರ್ಡ್ ಮತ್ತು ಟಿಕೆಟ್ ಮಾರಾಟ ಇರುವುದಿಲ್ಲ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.